
ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲಕಿ ಕಾವ್ಯಾ ಮಾರನ್ ಅವರು ಗ್ರೀಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಇದೀಗ ತವರಿಗೆ ಮರಳಿದ್ದಾರೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನವದಂಪತಿ ಬಂದಿಳಿಯುತ್ತಿದ್ದಂತೆ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ನವೆಂಬರ್ 11ರಂದು ಗ್ರೀಸ್‌ನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅನಿರುದ್ಧ್ ಮತ್ತು ಕಾವ್ಯಾ ಸರಳ ಹಾಗೂ ಸುಂದರವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..
ಈ ವಿವಾಹ ಸಮಾರಂಭದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಹಲವು ಗಣ್ಯರು ಹಾಗೂ ಚಿತ್ರರಂಗದ ತಾರೆಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದರು. ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ವಧು-ವರರ ಪೋಷಕರಾದ ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್, ಕಾವೇರಿ ಮಾರನ್, ರವಿ ರಾಘವೇಂದ್ರ ಹಾಗೂ ಲಕ್ಷ್ಮಿ ರವಿಚಂದರ್ ಅವರು ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ.
ವಿವಾಹದ ಬಳಿಕ ಅನಿರುದ್ಧ್ ರವಿಚಂದರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪತ್ನಿ ಕಾವ್ಯಾ ಅವರೊಂದಿಗಿನ ಮೊದಲ ಫೋಟೋ ಹಂಚಿಕೊಂಡು, ‘ನನ್ನ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅಪೂರ್ವ ಕ್ಷಣ, ಜೀವನಪರ್ಯಂತಕ್ಕಾಗಿ 11.11’ ಎಂದು ಪ್ರೀತಿಯ ಸಾಲುಗಳನ್ನು ಬರೆದುಕೊಂಡಿದ್ದರು. ಮದುವೆಯ ವಿಶೇಷ ದಿನದಂದು ಈ ಜೋಡಿಯು ಖ್ಯಾತ ವಸ್ತ್ರವಿನ್ಯಾಸಕ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದರು.
ಗ್ರೀಸ್‌ನಲ್ಲಿ ಮದುವೆ ಮುಗಿಸಿ ಚೆನ್ನೈಗೆ ವಾಪಸಾಗಿರುವ ಈ ಜೋಡಿಯ ವಿವಾಹ ಸಂಭ್ರಮ ಇನ್ನೂ ಮುಗಿದಿಲ್ಲ. ಎರಡೂ ಕುಟುಂಬಗಳು ನವೆಂಬರ್ 21ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿವೆ. ಈ ಸಮಾರಂಭಕ್ಕೆ ಚಿತ್ರರಂಗ, ಕ್ರೀಡಾ ಲೋಕ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಆಗಮಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಪುರೋಹಿತರಿಲ್ಲದೆ ಮದುವೆಯಾದ ಅನಿರುದ್ಧ್ – ಕಾವ್ಯಾ; ಏನಿದು ಸ್ವಾಭಿಮಾನಿ ವಿವಾಹ?
ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅನಿರುದ್ಧ್ ಅವರು 2012ರಲ್ಲಿ ‘3’ ಚಿತ್ರದ ‘ವೈ ದಿಸ್ ಕೊಲವೆರಿ ಡಿ’ ಹಾಡಿನ ಮೂಲಕ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದರು. ಇತ್ತೀಚಿನ ದಿನಗಳಲ್ಲಿ ‘ಜವಾನ್’, ‘ಲಿಯೋ’, ‘ಜೈಲರ್’, ‘ವಿಕ್ರಮ್’, ‘ಕೂಲಿ’, ‘ಡಿಸಿ’ ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.