ಮದುವೆಯ ಫೋಟೋ ಹಂಚಿಕೊಂಡ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್
ಗ್ರೀಸ್ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಅವರು ಹಸೆಮಣೆ ಏರಿದ್ದಾರೆ. ಈ ಮದುವೆಗೆ ಕುಟುಂಬದವರು, ಆಪ್ತರು ಹಾಗೂ ಕೆಲವೇ ಕೆಲವು ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಮದುವೆ ಬಳಿಕ ಅನಿರುದ್ಧ್ ರವಿಚಂದರ್ ಅವರು ಮೊದಲ ಬಾರಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಒಡತಿ, ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ಗ್ರೀಸ್ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನಿರುದ್ಧ್, ‘ನನ್ನ ಜೀವನದ ಏಕೈಕ ಮತ್ತು ಜೀವಮಾನದ ಪಯಣ (11.11)’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ನವೆಂಬರ್ 10 ಮತ್ತು 11ರಂದು ಎರಡು ದಿನಗಳ ಕಾಲ ಯುರೋಪ್ನ ಗ್ರೀಸ್ನಲ್ಲಿ ಮದುವೆ ಸಮಾರಂಭಗಳು ಜರುಗಿದವು. ಅತ್ಯಂತ ಆಪ್ತರು ಹಾಗೂ ಗಣ್ಯ ವ್ಯಕ್ತಿಗಳನ್ನು ವಿಶೇಷ ವಿಮಾನಗಳ ಮೂಲಕ ಈ ಮದುವೆಗೆ ಆಹ್ವಾನಿಸಲಾಗಿತ್ತು. ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ತಮಿಳುನಾಡಿನ ಪ್ರಮುಖ ರಾಜಕೀಯ ಧುರೀಣರು ಸೇರಿದಂತೆ ಕೆಲವು ಗಣ್ಯರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಗೆ ಆಶೀರ್ವದಿಸಿದರು.
View this post on Instagram
ಮದುವೆಯ ವೇಳೆ ಈ ಜೋಡಿ ಸಾಂಪ್ರದಾಯಿಕ ಹಾಗೂ ಇಂಡೋ-ವೆಸ್ಟರ್ನ್ ಶೈಲಿಯ ಉಡುಗೆಯಲ್ಲಿ ಕಂಗೊಳಿಸಿದರು. ಅನಿರುದ್ಧ್ ಅವರು ಕ್ರೀಮ್-ಬೀಜ್ ಬಣ್ಣದ ಕುರ್ತಾ ಹಾಗೂ ಕಸ್ಟಮೈಸ್ಡ್ ಜ್ಯಾಕೆಟ್ ಧರಿಸಿದ್ದರೆ, ಕಾವ್ಯಾ ಮಾರನ್ ಅವರು ಬೆಳ್ಳಿ ಬಣ್ಣದ ಹೂವಿನ ಎಂಬ್ರಾಯ್ಡರಿ ವಿನ್ಯಾಸ ಹೊಂದಿದ್ದ ರೋಸ್-ಪಿಂಕ್ ಬಣ್ಣದ ಗೌನ್ನಲ್ಲಿ ದೇವತೆಯಂತೆ ಕಂಗೊಳಿಸುತ್ತಿದ್ದರು.
ಗ್ರೀಸ್ನಲ್ಲಿ ಮದುವೆ ಮುಗಿಸಿಕೊಂಡು ಭಾರತಕ್ಕೆ ಮರಳಲಿರುವ ಈ ಜೋಡಿಗೆ ನವೆಂಬರ್ 21ರಂದು ತಮಿಳುನಾಡಿನ ಚೆನ್ನೈನಲ್ಲಿ ಬೃಹತ್ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗಷ್ಟೇ ಸನ್ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಮತ್ತು ಕಾವೇರಿ ಮಾರನ್ ಅವರು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಮದುವೆಯ ಆರತಕ್ಷತೆಗೆ ಅಧಿಕೃತವಾಗಿ ಆಹ್ವಾನ ನೀಡಿದ್ದರು.
ಇದನ್ನೂ ಓದಿ: ಕನ್ನಡದಲ್ಲಿ ಯಾವ ಮ್ಯೂಸಿಕ್ ಡೈರೆಕ್ಟರ್ಗಳೂ ಕೇಳದಷ್ಟು ಸಂಭಾವನೆ ಪಡೆದ ಅನಿರುದ್ಧ್ ರವಿಚಂದರ್
ನವೆಂಬರ್ 21ರಂದು ನಡೆಯಲಿರುವ ರಿಸೆಪ್ಷನ್ಗೆ ಚಿತ್ರರಂಗದ ಸೆಲೆಬ್ರಿಟಿಗಳು, ಉದ್ಯಮ ಕ್ಷೇತ್ರದ ಹಾಗೂ ರಾಜಕೀಯದ ಗಣ್ಯರು ಸಾಕ್ಷಿಯಾಗಲಿದ್ದಾರೆ. ಈಗ ಅನಿರುದ್ಧ್ ರವಿಚಂದರ್ ಅವರು ಹಂಚಿಕೊಂಡಿರುವ ಫೋಟೋಗಳನ್ನು ನೋಡಿ ಅನೇಕ ಸೆಲೆಬ್ರಿಟಿಗಳು ಕಮೆಂಟ್ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




