
ಬಾಲಿವುಡ್ ನಟ ಸನ್ನಿ ಡಿಯೋಲ್ ಮುಖ್ಯಭೂಮಿಕೆಯಲ್ಲಿರುವ ‘ಸೂರ್ಯ: ಅಂತ್ ಸೆ ಆರಂಭ್ ತಕ್’ ಚಿತ್ರದ ಟ್ರೇಲರ್ ಮತ್ತು ಸಿನಿಮಾದಲ್ಲಿ ಕಡ್ಡಾಯವಾಗಿ ಡಿಸ್ಕ್ಲೇಮರ್ ಸೇರಿಸುವುದಾಗಿ ಚಿತ್ರದ ನಿರ್ಮಾಪಕರು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. ವೈದ್ಯ ವೃತ್ತಿಯಲ್ಲಿರುವವರ ಬಗ್ಗೆ ಚಿತ್ರದಲ್ಲಿ ತಪ್ಪಾಗಿ ಚಿತ್ರಿಸಲಾಗಿದೆ ಎಂದು ವೈದ್ಯರ ಗುಂಪೊಂದು ವಿರೋಧ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಬೆಳವಣಿಗೆ ನಡೆದಿದೆ.
ವೈದ್ಯ ನಿಶಾಂತ್ ಸೋನಿ ಹಾಗೂ ಇತರೆ ವೈದ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರ ಪೀಠ, ನಿರ್ಮಾಪಕರ ಪರ ವಕೀಲರ ಒಪ್ಪಿಗೆಯನ್ನು ದಾಖಲಿಸಿಕೊಂಡು ಅರ್ಜಿಯನ್ನು ವಿಲೇವಾರಿ ಮಾಡಿದೆ. ಚಿತ್ರದಲ್ಲಿ ವೈದ್ಯರನ್ನು ನಕಾರಾತ್ಮಕವಾಗಿ ಬಿಂಬಿಸುವುದು ಆರೋಗ್ಯ ಕಾರ್ಯಕರ್ತರ ಸುರಕ್ಷತೆಗೆ ಧಕ್ಕೆ ತರಬಹುದು ಮತ್ತು ರೋಗಿಗಳ ಸಂಬಂಧಿಕರಿಂದ ಹಲ್ಲೆಗಳು ಹೆಚ್ಚಾಗಲು ಕಾರಣವಾಗಬಹುದು ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು.
ಸಿನಿಮಾದ ನಿರ್ಮಾಪಕರ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಜೀವ್ ನಾಯರ್, ಈ ಚಿತ್ರವು ಮಲಯಾಳಂನ ಸೂಪರ್‌ಹಿಟ್ ‘ಜೋಸೆಫ್’ ಸಿನಿಮಾದ ರಿಮೇಕ್ ಆಗಿದ್ದು, ಮೂಲ ಚಿತ್ರಕ್ಕೆ ಯಾವುದೇ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ತಡೆ ಸಿಕ್ಕಿರಲಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಅಲ್ಲದೆ, ಚಿತ್ರವು ಕಾಲ್ಪನಿಕ ಕಥೆಯಾಗಿದ್ದು, ಇದು ಮಲಯಾಳಂ ಚಿತ್ರದ ರಿಮೇಕ್ ಎಂಬ ಸ್ಪಷ್ಟನೆಯನ್ನು ಟ್ರೇಲರ್ ಹಾಗೂ ಸಿನಿಮಾದಲ್ಲಿ ಸೇರಿಸಲು ನಿರ್ಮಾಪಕರು ಸಿದ್ಧರಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಸನ್ನಿ ಡಿಯೋಲ್ ನಟನೆಯ ‘ಸೂರ್ಯ’ ಸಿನಿಮಾ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಣೆ
ಮೂಲ ಚಿತ್ರಕ್ಕೆ ಯಾವುದೇ ನಿರ್ಬಂಧವಿಲ್ಲದಿರುವುದು ಮತ್ತು ನಿರ್ಮಾಪಕರು ಡಿಸ್ಕ್ಲೇಮರ್ ಸೇರಿಸಲು ಒಪ್ಪಿಗೆ ನೀಡಿರುವುದರಿಂದ, ಈ ವಿಷಯದಲ್ಲಿ ಹೆಚ್ಚಿನ ವಿಚಾರಣೆ ಅವಶ್ಯಕತೆಯಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಎಂ. ಪದ್ಮಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಇದೇ ಸಿನಿಮಾ ‘ರವಿ ಬೋಪಣ್ಣ’ ಹೆಸರಿನಲ್ಲಿ ರಿಮೇಕ್ ಆಗಿ 2022ರಲ್ಲಿ ರಿಲೀಸ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.