
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ಉದಾರ ಸ್ವಭಾವಕ್ಕೆ ಮತ್ತೊಮ್ಮೆ ಹೆಸರುವಾಸಿಯಾಗಿದ್ದಾರೆ. ಬಹುನಿರೀಕ್ಷಿತ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದ ತಾರಾಗಣ ಹಾಗೂ ತಂತ್ರಜ್ಞರಿಗೆ ಸಲ್ಮಾನ್ ಖಾನ್ ಅವರು ಅಚ್ಚರಿಯೊಂದನ್ನು ನೀಡಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ, ಮುಂಬೈನ ಪನ್ವೆಲ್‌ನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಚಿತ್ರತಂಡಕ್ಕಾಗಿ ವಿಶೇಷ ಗೆಟ್‌ಟುಗೆದರ್ ಆಯೋಜಿಸಿದ್ದ ಸಲ್ಮಾನ್, ಇಡೀ ತಂಡಕ್ಕೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಐಷಾರಾಮಿ ವಾಚ್ಗಳನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ನವೆಂಬರ್ 12ರಂದು ನಡೆದ ಈ ಸಭೆಯ ಬಗ್ಗೆ ಚಿತ್ರತಂಡಕ್ಕೆ ಆರಂಭದಲ್ಲಿ ಕೇವಲ ಸಿನಿಮಾದ ಪ್ರಚಾರದ ಯೋಜನೆಗಳ ಬಗ್ಗೆ ಚರ್ಚಿಸಲು ಕರೆಯಲಾಗಿದೆ ಎಂದಷ್ಟೇ ತಿಳಿಸಲಾಗಿತ್ತು. ಆದರೆ, ಇದು ಕೇವಲ ಕೆಲಸದ ಸಭೆಯಾಗದೆ ಭರ್ಜರಿ ಸೆಲೆಬ್ರೇಷನ್ ಆಗಿ ಬದಲಾಯಿತು. ಸಿನಿಮಾದ ಕಷ್ಟದ ದಿನಗಳಲ್ಲಿ ಹಾಗೂ ಏಳು-ಬೀಳುಗಳಲ್ಲಿ ತಮ್ಮೊಂದಿಗೆ ಗಟ್ಟಿಯಾಗಿ ನಿಂತ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವ ಸಲುವಾಗಿ ಸಲ್ಮಾನ್ ಖಾನ್ ಈ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ.
ವರದಿಗಳ ಪ್ರಕಾರ, ‘ಕಪೂರ್ ವಾಚ್ ಕಂಪನಿ’ಯಿಂದ ಸುಮಾರು 20ರಿಂದ 25 ಐಷಾರಾಮಿ ವಾಚ್ಗಳನ್ನು ಖರೀದಿಸಲಾಗಿದ್ದು, ಪ್ರತಿಯೊಂದು ವಾಚ್‌ನ ಬೆಲೆಯೂ 2 ಲಕ್ಷದಿಂದ 6 ಲಕ್ಷ ರೂಪಾಯಿಯವರೆಗೆ ಇದೆ ಎಂದು ತಿಳಿದುಬಂದಿದೆ. ಚಿತ್ರತಂಡದಲ್ಲಿರುವ ಪುರುಷ ಮತ್ತು ಮಹಿಳಾ ಸಿಬ್ಬಂದಿಗಾಗಿ ಸಲ್ಮಾನ್ ಖಾನ್ ಪ್ರತ್ಯೇಕ ಬ್ರ್ಯಾಂಡ್‌ಗಳ ಕೈಗಡಿಯಾರಗಳನ್ನು ಆಯ್ಕೆ ಮಾಡಿದ್ದರು.
ನವೆಂಬರ್ 10ರಂದು ಮುಂಬೈನಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿತ್ತು. ಇದರ ಬೆನ್ನಲ್ಲೇ ನವೆಂಬರ್ 12ರಂದು ನಡೆದ ಈ ಕೂಟದಲ್ಲಿ ನಿರ್ದೇಶಕ ಅಪೂರ್ವ ಲಖಿಯಾ, ನಟಿ ಚಿತ್ರಾಂಗದಾ ಸಿಂಗ್, ನಟರಾದ ಅಂಕುರ್ ಭಾಟಿಯಾ, ವಿಪಿನ್ ಭಾರದ್ವಾಜ್, ತನ್ಯಾ ದೇಸಾಯಿ ಹಾಗೂ ಸಂಭಾಷಣೆಕಾರ ಚಿಂತನ್ ಶಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಚಿತ್ರತಂಡದ ಕೆಲ ಸದಸ್ಯರು ಈ ಸುಂದರ ಸಂಜೆಯ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ ಕ್ಲಾಶ್ ನಡುವೆಯೂ ಶ್ರದ್ಧಾ ಕಪೂರ್ ಚಿತ್ರಕ್ಕೆ ಶುಭ ಹಾರೈಸಿದ ಸಲ್ಮಾನ್ ಖಾನ್
ಅಪೂರ್ವ ಲಖಿಯಾ ನಿರ್ದೇಶನದ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಒಂದು ಪೂರ್ಣ ಪ್ರಮಾಣದ ಯುದ್ಧದ ಕಥಾಹಂದರವನ್ನು ಹೊಂದಿರುವ ಸಿನಿಮಾವಾಗಿದೆ. ನಿರ್ಮಾಣ ಹಂತದಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ಈ ಸಿನಿಮಾ ಸಲ್ಮಾನ್ ಖಾನ್ ಅವರ ಈ ವರ್ಷದ ಏಕೈಕ ಚಿತ್ರವಾಗಿದೆ. ಡಿಸೆಂಬರ್ 4ರಂದು ದೇಶಾದ್ಯಂತ ತೆರೆಕಾಣಲು ಸಜ್ಜಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.