
ಚೆಕ್ ಬೌನ್ಸ್ ಪ್ರಕರಣದಲ್ಲಿ 2 ಕೋಟಿ ರೂಪಾಯಿ ಠೇವಣಿ ಇಡುವಂತೆ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ಈ ಮೊದಲು ನೀಡಿದ್ದ ಸಮಯವನ್ನು ಮುಂಬರುವ ಮಂಗಳವಾರದವರೆಗೆ (ಅಕ್ಟೋಬರ್ 13) ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ವಿಚಾರಣೆ ವೇಳೆ ಅವರು 1.15 ಕೋಟಿ ರೂಪಾಯಿ ಮೌಲ್ಯದ ಡಿಮಾಂಡ್ ಡ್ರಾಫ್ಟ್ ಸಲ್ಲಿಸಿ, ಉಳಿದ ಮೊತ್ತವನ್ನು ಪಾವತಿಸಲು ಹೆಚ್ಚುವರಿ ಕಾಲಾವಕಾಶ ಕೋರಿದ್ದರು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯಮಾಲ್ಯ ಭಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಕೋರ್ಟ್‌ನಲ್ಲಿ ಹಾಜರಿದ್ದ ರಾಜ್‌ಪಾಲ್ ಯಾದವ್ ಅವರಿಗೆ ಉಳಿದ 85 ಲಕ್ಷ ರೂಪಾಯಿಗಳನ್ನು ಮಂಗಳವಾರದೊಳಗೆ ಜಮಾ ಮಾಡುವಂತೆ ನಿರ್ದೇಶನ ನೀಡಿದೆ. ಈ ಹಣ ಪಾವತಿಯಾದ ಬಳಿಕ ದೆಹಲಿ ಹೈಕೋರ್ಟ್ ವಿಧಿಸಿರುವ ಶಿಕ್ಷೆ ಮತ್ತು ಮೂರು ತಿಂಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಅವರು ಸಲ್ಲಿಸಿರುವ ಮೇಲ್ಮನವಿಯನ್ನು ಪೀಠವು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ವಿಚಾರಣೆ ವೇಳೆ ನಟನ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು, ‘ನೀವು ಮೊದಲು 85 ಲಕ್ಷ ರೂಪಾಯಿ ಠೇವಣಿ ಇಡುವ ನಮ್ಮ ಆದೇಶವನ್ನು ಪಾಲಿಸಿ. ಉಳಿದ ಮೊತ್ತಕ್ಕೆ ನಾವು ಪಾವತಿ ವೇಳಾಪಟ್ಟಿಯನ್ನು ನಿಗದಿಪಡಿಸುತ್ತೇವೆ. ನಿಮ್ಮ ವರ್ತನೆಯನ್ನು ನೋಡಿದರೆ ನೀವು ಜೈಲಿನಲ್ಲಿರಬೇಕಿತ್ತು. ನಿಮ್ಮ ನಡೆ ನಮಗೆ ತೃಪ್ತಿ ತಂದಿಲ್ಲ. ಆದರೆ ನೀವು 1.15 ಕೋಟಿ ರೂಪಾಯಿ ತಂದಿರುವುದರಿಂದ ಸ್ವಲ್ಪ ಕಾಲಾವಕಾಶ ನೀಡುತ್ತಿದ್ದೇವೆ’ ಎಂದು ಎಚ್ಚರಿಸಿತು.
ಅಲ್ಲದೆ, ‘ನಿಮ್ಮ ಮೇಲ್ಮನವಿಯಲ್ಲಿ ನೋಟಿಸ್ ಜಾರಿ ಮಾಡುವುದು ಮತ್ತು ನಿಮ್ಮ ಶಿಕ್ಷೆಯನ್ನು ಎರಡು ವರ್ಷಗಳವರೆಗೆ ಹೆಚ್ಚಿಸುವುದು ನಮ್ಮ ವಿವೇಚನೆಗೆ ಒಳಪಟ್ಟಿದೆ’ ಎಂದು ನ್ಯಾಯಪೀಠ ತೀವ್ರ ತಾರಟೆಗೆ ತೆಗೆದುಕೊಂಡಿತು. ನಟನ ಪರ ವಾದ ಮಂಡಿಸಿದ ವಕೀಲ ವಿಕ್ರಾಂತ್ ಯಾದವ್, ‘ಅವರ ಅದೃಷ್ಟ ಈಗ ಒಳ್ಳೆಯ ಹಾದಿಗೆ ಮರಳುತ್ತಿದೆ. ಪ್ರಸ್ತುತ ಅವರಿಗೆ ಸಿನಿಮಾಗಳಲ್ಲಿ ಅಭಿನಯಿಸಲು ಹಾಗೂ ನಿರ್ದೇಶನ ಮಾಡಲು ಅವಕಾಶಗಳು ಸಿಗುತ್ತಿವೆ’ ಎಂದು ಕೋರ್ಟ್‌ಗೆ ತಿಳಿಸಿದರು.
ಇದನ್ನೂ ಓದಿ: ಸಾಲದ ಸುಳಿಗೆ ಸಿಲುಕಿ ನಟ ರಾಜ್‌ಪಾಲ್ ಯಾದವ್ ಆಸ್ತಿ ಹರಾಜು; ಹೆಚ್ಚಿತು ಸಂಕಷ್ಟ
ಉಳಿದ ಹಣವನ್ನು ತಕ್ಷಣವೇ ಜೋಡಿಸಲು ಸಾಧ್ಯವಾಗದಿರಲು ಪಿತೃ ಪಕ್ಷ ಕಾರಣ ಎಂದು ರಾಜ್‌ಪಾಲ್ ಯಾದವ್ ಕೋರ್ಟ್‌ಗೆ ತಿಳಿಸಿದರು. ಈ ಅವಧಿಯಲ್ಲಿ ಆಸ್ತಿ ವಹಿವಾಟು ನಡೆಸುವುದು ಶುಭವಲ್ಲ ಎಂಬ ನಂಬಿಕೆಯಿಂದಾಗಿ ಜಮೀನು ಮಾರಾಟ ಪ್ರಕ್ರಿಯೆ ತಡವಾಗಿದೆ ಎಂದು ಸ್ಪಷ್ಟಪಡಿಸಿದರು. ತಮ್ಮ ಜಮೀನು ಖರೀದಿಸಲು ಒಪ್ಪಿಕೊಂಡಿರುವ ವ್ಯಕ್ತಿಯನ್ನೂ ನಟ ಕೋರ್ಟ್‌ಗೆ ಕರೆತಂದಿದ್ದು, ಅವರು ಬಾಕಿ 85 ಲಕ್ಷ ರೂಪಾಯಿವನ್ನು ಡಿಡಿ ಮೂಲಕ ವರ್ಗಾಯಿಸಲು ಸಮ್ಮತಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.