
ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅಪರೂಪದ ದಾಖಲೆ ಬರೆದಿದ್ದಾರೆ. ‘ವೆರೈಟಿ’ ಸಂಸ್ಥೆ ಪ್ರಕಟಿಸಿದ ಸಾರ್ವಕಾಲಿಕ 100 ಶ್ರೇಷ್ಠ ಸಿನಿಮಾ ಸ್ಟಾರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಇವರಾಗಿದ್ದಾರೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್ 92ನೇ ಸ್ಥಾನದಲ್ಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ‘ದೇವದಾಸ್’ ಚಿತ್ರವನ್ನು ಅವರ ಅತ್ತುತ್ತಮ ಸಿನಿಮಾವಾಗಿ ಉಲ್ಲೇಖಿಸಲಾಗಿದೆ.
ಈ ಪಟ್ಟಿಯಲ್ಲಿ ಮರ್ಲಿನ್ ಮನ್ರೋ ಮೊದಲ ಸ್ಥಾನದಲ್ಲಿದ್ದಾರೆ. ಹಂಫ್ರಿ ಬೊಗಾರ್ಟ್ ಎರಡನೇ ಸ್ಥಾನದಲ್ಲಿದ್ದಾರೆ. ಚಾರ್ಲಿ ಚಾಪ್ಲಿನ್ ಮೂರು, ಜ್ಯಾಕ್ ನಿಕಲ್ಸನ್ ನಾಲ್ಕು, ಕ್ಯಾಥರೀನ್ ಹೆಪ್ಬರ್ನ್ ಐದು, ಸಿಡ್ನಿ ಪೊಯಿಟಿಯರ್ ಆರು. ಮರ್ಲಾನ್ ಬ್ರಾಂಡೋ ಏಳು, ಟಾಮ್ ಕ್ರೂಸ್ ಎಂಟು, ಟೊಶಿರೊ ಮಿಫುನೆ ಒಂಭತ್ತು, ಬಾರ್ಬ್ರಾ ಸ್ಟ್ರೈಸಂಡ್ ಹತ್ತನೇ ಸ್ಥಾನ ಪಡೆದಿದ್ದಾರೆ.
ಜೂಲಿಯಾ ರಾಬರ್ಟ್ಸ್ 13ನೇ ಸ್ಥಾನದಲ್ಲಿದ್ದಾರೆ. ಆಡ್ರೆ ಹೆಪ್ಬರ್ನ್ 26ನೇ ಸ್ಥಾನದಲ್ಲಿದ್ದಾರೆ. ರಾಬರ್ಟ್ ಡೌನಿ ಜೂನಿಯರ್ 74ನೇ ಸ್ಥಾನದಲ್ಲಿದ್ದಾರೆ. ರಯಾನ್ ಗೋಸ್ಲಿಂಗ್ 77ನೇ ಸ್ಥಾನದಲ್ಲಿದ್ದಾರೆ. ರಾಬರ್ಟ್ ಪ್ಯಾಟಿನ್ಸನ್ 83ನೇ ಸ್ಥಾನದಲ್ಲಿದ್ದಾರೆ. ಟಿಮೋಥೀ ಚಲಮೆಟ್ 86ನೇ ಸ್ಥಾನದಲ್ಲಿದ್ದಾರೆ. ಎಮ್ಮಾ ಸ್ಟೋನ್ 94ನೇ ಸ್ಥಾನದಲ್ಲಿದ್ದಾರೆ. ಝೆಂಡಯಾ 98ನೇ ಸ್ಥಾನದಲ್ಲಿದ್ದಾರೆ.
ಶಾರುಖ್ ಖಾನ್ 80ರ ದಶಕದ ಕೊನೆಯಲ್ಲಿ ಕಿರುತೆರೆಯಿಂದ ಪಯಣ ಆರಂಭಿಸಿದರು. ನಂತರ ‘ದೀವಾನಾ’ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದರು. 2018ರಿಂದ 2022ರವರೆಗೆ ಸೋಲು ಕಂಡಿದ್ದರು. 2023ರಲ್ಲಿ ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದರು.
ಇದನ್ನೂ ಓದಿ: ಶಾರುಖ್ ಖಾನ್, ಅಕ್ಷಯ್ ಕುಮಾರ್ ಸಾಲಿಗೆ ಸೇರಿದ ಸೂರ್ಯ, ಸಾಧನೆಯೇನು?
ಸಿದ್ದಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಚಿತ್ರದಲ್ಲಿ ಶಾರುಖ್ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ. ಮಗಳು ಸುಹಾನಾ ಖಾನ್ ಈ ಚಿತ್ರದ ಮೂಲಕ ದೊಡ್ಡ ಪರದೆಗೆ ಬರುತ್ತಿದ್ದಾರೆ. ಈ ಹಿಂದೆ ಟೈಮ್ ಮತ್ತು ನ್ಯೂಸ್‌ವೀಕ್ ಪತ್ರಿಕೆಗಳ ಪ್ರಭಾವಿ ಪಟ್ಟಿಯಲ್ಲೂ ಶಾರುಖ್ ಸ್ಥಾನ ಪಡೆದಿದ್ದರು. ಈಗ ಅವರಿಗೆ ಮತ್ತೊಂದು ಹಿರಿಮೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.