ಬಾಲಿವುಡ್ನಲ್ಲಿ ಈಗಾಗಲೇ ಹೆಸರು ಮಾಡಿರುವ ನಟಿ ಜಾನ್ವಿ ಕಪೂರ್ ಅವರು ಈಗ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೂ ತಮ್ಮ ಛಾಪು ಮೂಡಿಸಲು ಬರುತ್ತಿದ್ದಾರೆ. ಟಾಲಿವುಡ್ನ ‘ದೇವರ: ಪಾರ್ಟ್ 1’ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿ ಆಗಿದ್ದಾರೆ. ಜೂನಿಯರ್ ಎನ್ಟಿಆರ್ ಮತ್ತು ಜಾನ್ವಿ ಕಪೂರ್ ಅವರು ಜೋಡಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಬ್ಬರ ಕಾಂಬಿನೇಷನ್ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ಇಬ್ಬರ ನಡುವೆ ಇರುವ ವಯಸ್ಸಿನ ಅಂತರದ ಬಗ್ಗೆ ನೆಟ್ಟಿಗರು ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ.
‘ದೇವರ: ಪಾರ್ಟ್ 1’ ಸಿನಿಮಾದಿಂದ ಹೊಸ ಹಾಡು ಬಿಡುಗಡೆ ಮಾಡಲಾಗಿದೆ. ಈ ಹಾಡಿನಲ್ಲಿ ಜೂನಿಯರ್ ಎನ್ಟಿಆರ್ ಮತ್ತು ಜಾನ್ವಿ ಕಪೂರ್ ಅವರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಅಪ್ಪಟ ಅಭಿಮಾನಿಗಳು ಈ ಹಾಡನ್ನು ಇಷ್ಟಪಡುತ್ತಿದ್ದಾರೆ. ಆದರೆ ನೆಟ್ಟಿಗರು ಯಾಕೋ ಮೆಚ್ಚಿಕೊಂಡಿಲ್ಲ. ಅದಕ್ಕೆ ಮುಖ್ಯ ಕಾರಣ ಆಗಿರುವುದು ನಟ-ನಟಿ ನಡುವೆ ಇರುವ ವಯಸ್ಸಿನ ಅಂತರ.
ಇದನ್ನೂ ಓದಿ: ಜಾನ್ವಿ ಕಪೂರ್ ವೃತ್ತಿ ಜೀವನದಲ್ಲಿ ಮತ್ತೊಂದು ಸೋಲು; ಎಷ್ಟೊಂದು ಹೀನಾಯ ಕಲೆಕ್ಷನ್
ಜೂನಿಯರ್ ಎನ್ಟಿಆರ್ ಅವರಿಗೆ ಈಗ 41 ವರ್ಷ ವಯಸ್ಸು. ಅವರಿಗೆ ಜೋಡಿಯಾಗಿ 27ರ ಪ್ರಾಯದ ಜಾನ್ವಿ ಕಪೂರ್ ನಟಿಸಿದ್ದಾರೆ. ಇಬ್ಬರ ನಡುವೆ ಬರೋಬ್ಬರಿ 14 ವರ್ಷಗಳ ವಯಸ್ಸಿನ ಅಂತರ ಇದೆ. ಹೊಸ ಹಾಡಿನಲ್ಲಿ ಈ ಜೋಡಿ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದೆ. ವಯಸ್ಸಿನ ಅಂತರದ ಕಾರಣದಿಂದ ಜಾನ್ವಿ ಕಪೂರ್ ಮತ್ತು ಜೂನಿಯರ್ ಎನ್ಟಿಆರ್ ಕೆಮಿಸ್ಟ್ರಿ ಚೆನ್ನಾಗಿ ಕಾಣುತ್ತಿಲ್ಲ ಎಂಬ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ. ಈ ಬಗ್ಗೆ ಜನರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಇನ್ನು, ಜೂನಿಯರ್ ಎನ್ಟಿಆರ್ ಅವರು ಅತ್ಯುತ್ತಮ ಡ್ಯಾನ್ಸರ್ ಎಂಬುದರಲ್ಲಿ ಅನುಮಾನವೇ ಇಲ್ಲ. ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡಿನಲ್ಲಿ ಅವರು ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಆದರೆ ಈಗ ‘ದೇವರ: ಪಾರ್ಟ್ 1’ ಸಿನಿಮಾದ ರೊಮ್ಯಾಂಟಿಕ್ ಹಾಡಿನಲ್ಲಿ ಅವರ ಡ್ಯಾನ್ಸ್ ಸ್ಟೆಪ್ಸ್ ನೋಡಿದ ಜನರಿಗೆ ಕಿಂಚಿತ್ತೂ ಇಷ್ಟ ಆಗಿಲ್ಲ. ಇದರಿಂದ ಸಿನಿಮಾಗೆ ಸ್ವಲ್ಪ ನೆಗೆಟಿವ್ ಆಗುವ ಸೂಚನೆ ಕಾಣಿಸಿದೆ. ಈ ಬಗ್ಗೆ ಚಿತ್ರತಂಡದವರು ಪ್ರತಿಕ್ರಿಯೆ ನೀಡಿಲ್ಲ. ಕೊರಟಾಲ ಶಿವ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.