ಡ್ರಗ್ಸ್ ಪ್ರಕರಣದ ಆರೋಪಿ ಹೇಮಾಗೆ ಶಾಕ್ ನೀಡಿದ ತೆಲುಗು ಕಲಾವಿದರ ಸಂಘ

|

Updated on: Jun 07, 2024 | 2:45 PM

ಬೆಂಗಳೂರಿನಲ್ಲಿ ನಡೆದ ರೇವಾ ಪಾರ್ಟಿಯಲ್ಲಿ ಭಾಗಿಯಾಗಿ ಡ್ರಗ್ಸ್ ಸೇವಿಸಿರುವ ಆರೋಪದಲ್ಲಿ ಜೈಲು ಪಾಲಾಗಿರುವ ನಟಿ ಹೇಮಾ ರನ್ನು ತೆಲುಗು ಸಿನಿಮಾ ಕಲಾವಿದರ ಸಂಘದಿಂದ ವಜಾ ಮಾಡಲಾಗಿದೆ.

ಡ್ರಗ್ಸ್ ಪ್ರಕರಣದ ಆರೋಪಿ ಹೇಮಾಗೆ ಶಾಕ್ ನೀಡಿದ ತೆಲುಗು ಕಲಾವಿದರ ಸಂಘ
Follow us on

ಕೆಲ ವಾರಗಳ ಹಿಂದೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ (Electronic City) ಹೊರಭಾಗದಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಡ್ರಗ್ಸ್ ಸೇವನೆ ಮಾಡಿದ್ದ ತೆಲುಗು ನಟಿ ಹೇಮಾರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಇದೀಗ ನಟಿ ಹೇಮಾ ನ್ಯಾಯಾಂಗ ವಶದಲ್ಲಿದ್ದಾರೆ. ಹೇಮಾ, ಈಗಲೂ ಸಹ ತಾವೇನು ತಪ್ಪು ಮಾಡಿಲ್ಲವೆಂದು, ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ಆರೋಪಿಸುತ್ತಿದ್ದಾರೆ. ಇದರ ನಡುವೆ ನಟಿ ಹೇಮಾಗೆ ತೆಲುಗು ಚಿತ್ರರಂಗದ ಕಲಾವಿದರ ಸಂಘ ಭರ್ಜರಿ ಶಾಕ್ ನೀಡಿದೆ.

ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ನ ಪದಾಧಿಕಾರಿಯೂ ಆಗಿರುವ ಹೇಮಾ ಕೊಲ್ಲ ಅವರನ್ನು ಮಾ ಸಂಘದಿಂದ ಉಚ್ಛಾಟನೆ ಮಾಡಿ ಆದೇಶವನ್ನು ‘ಮಾ’ನ ಹಾಲಿ ಅಧ್ಯಕ್ಷ ಮಂಚು ವಿಷ್ಣು ಹೊರಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಈ ಬಗ್ಗೆ ಟ್ವೀಟ್ ಮಾಡಿದ್ದ ಮಂಚು ವಿಷ್ಣು, ಹೇಮಾ ಕೊಲ್ಲ ಪರವಾದ ನಿಲವು ತಳೆದಿದ್ದರು. ಹೇಮಾ ವಿರುದ್ಧ ಕೆಲವು ಷಡ್ಯಂತ್ರಗಳು ನಡೆಯುತ್ತಿವೆ. ಆಕೆ ಅಪರಾಧಿ ಎಂದು ನಿರ್ಧಾರವಾಗುವವರೆಗೆ ಹೇಮಾ ವಿರುದ್ಧ ನಿರ್ಣಯಕ್ಕೆ ಬರಬೇಡಿ, ಸಾಮಾಜಿಕ ಜಾಲತಾಣದಲ್ಲಿ ಏನೂ ನಿಂದನಾತ್ಮಕ ಪೋಸ್ಟ್​ಗಳನ್ನು ಹಂಚಿಕೊಳ್ಳಬೇಡಿ ಎಂದಿದ್ದರು. ಆದರೆ ಈಗ ಮಂಚು ವಿಷ್ಣು ಅವರೇ ಹೇಮಾ ಅವರನ್ನು ಕಲಾವಿದರ ಸಂಘದಿಂದ ಹೊರಹಾಕಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ನಟಿ ಹೇಮಾರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳ ಸಲಹೆ ಪಡೆದು ಅಂತಿಮವಾಗಿ ಹೇಮಾರನ್ನು ಕಲಾವಿದರ ಸಂಘದಿಂದ ವಜಾ ಮಾಡಲಾಗಿದೆ ಎಂದು ಮಂಚು ವಿಷ್ಣು ಹೇಳಿದ್ದಾರೆ. ವಜಾ ಮಾಡುವ ಮುನ್ನ, ಹೇಮಾಗೆ ಸಂಘದಿಂದ ನೊಟೀಸ್ ನೀಡಲಾಗಿತ್ತಂತೆ. ಡ್ರಗ್ಸ್ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿತ್ತಂತೆ. ಆದರೆ ಹೇಮಾ ಆ ನೊಟೀಸ್​ಗೂ ಯಾವುದೇ ಉತ್ತರ ನೀಡದೇ ಇರುವ ಕಾರಣ ಈಗ ಮಂಚು ವಿಷ್ಣು ಇತರೆ ಪದಾಧಿಕಾರಿಗಳ ನಿರ್ಣಯವನ್ನು ತೆಗೆದುಕೊಂಡು ಹೇಮಾರನ್ನು ಸ್ಥಾನದಿಂದ ತೆಗೆದು ಹಾಕಿರುವುದು ಮಾತ್ರವೇ ಅಲ್ಲದೆ ಕಲಾವಿದರ ಸಂಘದಿಂದಲೇ ಹೊರ ಹಾಕಿದ್ದಾರೆ.

ಇದನ್ನೂ ಓದಿ:ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ನಟಿ ಹೇಮಾರನ್ನು ಬ್ಯಾನ್ ಮಾಡುವಂತೆ ಒತ್ತಾಯ

ಡ್ರಗ್ಸ್ ಪ್ರಕರಣದಲ್ಲಿ ನಟಿ ಹೇಮಾ ಹೆಸರು ಕೇಳು ಬಂದ ಬಳಿಕ, ಹೇಮಾರನ್ನು ತೆಲುಗು ಚಿತ್ರರಂಗದಿಂದಲೇ ನಿಷೇಧಿಸಬೇಕು ಎಂಬ ಒತ್ತಾಯ ಕೆಲವು ಹಿರಿಯ ನಟ-ನಟಿಯರಿಂದ ಪದೇ ಪದೇ ಕೇಳಿ ಬರುತ್ತಲೇ ಇತ್ತು. ಆದರೆ ತೆಲುಗು ಚಿತ್ರರಂಗದಿಂದ ನಿಷೇಧ ಎಂಬುದು ಕಲಾವಿದರ ಸಂಘದ ಕೈಯಲ್ಲಿಲ್ಲವಾದ್ದರಿಂದ ಕಲಾವಿದರ ಸಂಘದ ಅಧ್ಯಕ್ಷ ಮಂಚು ವಿಷ್ಣು ಪ್ರಸ್ತುತ ಕಲಾವಿದರ ಸಂಘದಿಂದಷ್ಟೆ ಹೊರಗಿಟ್ಟಿದ್ದಾರೆ. ಇನ್ನು ಮುಂದೆ ಹೇಮಾಗೆ ಸಿನಿಮಾ ಅವಕಾಶಗಳು ಸಿಗುವುದು ಸಹ ಕಡಿಮೆ ಆಗಲಿವೆ ಎನ್ನಲಾಗುತ್ತಿದೆ.

ಹೇಮಾ, ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆದರೆ ತಾನು ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎಂದು ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದರು. ಆದರೆ ಬೆಂಗಳೂರು ಪೊಲೀಸರು, ಹೇಮಾ ಪಾರ್ಟಿಯಲ್ಲಿ ಇದ್ದಿದ್ದು ಖಾತ್ರಿಪಡಿಸಿದ್ದರು. ಬಳಿಕ ಹೇಮಾರ ರಕ್ತದ ಮಾದರಿಯಿಂದ ಅವರು ಡ್ರಗ್ಸ್ ಸೇವಿಸಿದ್ದು ಖಾತ್ರಿಯಾಗಿದ್ದು, ವಿಚಾರಣೆಗೆ ಬಂದಿದ್ದ ಅವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಮುಂದಿನ ಹದಿನಾಲ್ಕು ದಿನಗಳು ಅವರು ಜೈಲಿನಲ್ಲಿಯೇ ಸಮಯ ಕಳೆಯಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ