
ಖ್ಯಾತ ಸಂಗೀತ ಸಂಯೋಜಕ ಹಾಗೂ ರಾಜ್ಯಸಭಾ ಸದಸ್ಯ ಇಳಯರಾಜ ಹೆಸರು ಸಾಕಷ್ಟು ಚರ್ಚೆಯಲ್ಲಿ ಇದೆ. ತಮಿಳುನಾಡಿನ ಶ್ರೀವಿಲ್ಲಿಪುತ್ತೂರ್ ಆಂಡಾಳ್ ದೇವಸ್ಥಾನದ ಒಳಗೆ ಇಳಯರಾಜ ಅವರನ್ನು ಬಿಟ್ಟಿಲ್ಲ ಎಂಬ ಸುದ್ದಿ ಎಲ್ಲ ಕಡೆಗಳಲ್ಲಿ ಹರಿದಾಡಿದೆ. ಇದರಿಂದ ಅವರಿಗೆ ಅವಮಾನ ಆಗಿದೆ ಎಂಬ ಕೂಗು ಎದ್ದಿದೆ. ಕರ್ನಾಟಕದ ಸಚಿವ ಮಹದೇವಪ್ಪ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಘಟನೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಳಯರಾಜ, ಆ ರೀತಿಯ ಘಟನೆ ನಡೆದೇ ಇಲ್ಲ ಎಂದಿದ್ದಾರೆ. ಜೊತೆಗೆ ವದಂತಿಗಳಿಗೆ ಕಿವಿಕೊಡದಂತೆ ಕೋರಿದ್ದಾರೆ.
ಘಟನೆ ಬಗ್ಗೆ ತಮಿಳಿನಲ್ಲಿ ಟ್ವೀಟ್ ಮಾಡಿರುವ ಇಳಯರಾಜ, ‘ನನ್ನ ವಿಚಾರದಲ್ಲಿ ಕೆಲವರು ವದಂತಿ ಹಬ್ಬಿಸಿದ್ದಾರೆ. ನಾನು ಯಾವುದೇ ಸಮಯದಲ್ಲಿ ಅಥವಾ ಸ್ಥಳದಲ್ಲಿ ನನ್ನ ಸ್ವಾಭಿಮಾನವನ್ನು ಬಿಟ್ಟುಕೊಡುವವನಲ್ಲ. ನಡೆದಿರದ ಘಟನೆಯನ್ನು ನಡೆದಿರುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅಭಿಮಾನಿಗಳು ಹಾಗೂ ಜನರು ಈ ರೀತಿಯ ವದಂತಿಯನ್ನು ನಂಬಬಾರದು’ ಎಂದು ಇಳಯರಾಜ ಕೋರಿದ್ದಾರೆ.
ವಿರುದುನಗರ ಜಿಲ್ಲೆಯ ಶ್ರೀವಿಲ್ಲಿಪುತ್ತೂರಿನ ಆಂಡಾಳ್ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಳಯರಾಜ ಭಾಗವಹಿಸಿದ್ದರು. ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸಲಾಯಿತು. ದೇವಸ್ಥಾನದ ಅರ್ಥಮಂಟಪ ದಾಟಿ ಹೋಗದಂತೆ ಇಳಯರಾಜ ಅವರ ಬಳಿ ಕೋರಲಾಗಿದೆ.
ಇದನ್ನೂ ಓದಿ: ‘ಕೇಳದೆ ನಿಮಗೀಗ..’ ಕಂಪೋಸ್ ಮಾಡುವಾಗ ನಡೆದ ಅಪರೂಪದ ಘಟನೆ ಹೇಳಿದ ಇಳಯರಾಜ
ದೇವಸ್ಥಾನದ ಸಂಪ್ರದಾಯದ ಪ್ರಕಾರ ಅರ್ಚಕರು, ಮಠಾಧೀಶರು ಸೇರಿದಂತೆ ಅಧಿಕೃತ ಸಿಬ್ಬಂದಿಗೆ ಮಾತ್ರ ಅರ್ಥಮಂಟಪದ ಬಳಿ ಪ್ರವೇಶವಿದೆ. ಶಿಷ್ಟಾಚಾರದ ಕಾರಣದಿಂದ ಇಳಯರಾಜ ಅವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ಘಟನೆಯನ್ನು ಇಟ್ಟುಕೊಂಡು ಬೇರೆ ರೀತಿಯಲ್ಲಿ ಬಿಂಬಿಸಲಾಯಿತು. ಜಾತಿ ವಿಚಾರವನ್ನು ಇಲ್ಲಿ ಎಳೆದು ತರಲಾಯಿತು. ಇಳಯರಾಜ ಅವರಿಗೆ ಅವಮಾನ ಮಾಡಲಾಗಿದೆ ಎಂದು ಅನೇಕರು ಹೇಳಿದ್ದರು. ಇದು ಇಳಯರಾಜ ಗಮನಕ್ಕೂ ಬಂದಿದ್ದು, ಅವರೇ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವುದರಿಂದ ಎಲ್ಲಾ ವದಂತಿಗೆ ತೆರೆ ಬಿದ್ದಂತೆ ಆಗಿದೆ.
ಕರ್ನಾಟಕ ಸಮಾಜ ಕಲ್ಯಾಣ ಸಚಿವ ಎಚ್ಸಿ ಮಹದೇವಪ್ಪ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಸಂಗೀತ ಮಾಂತ್ರಿಕ, ಹಾಲಿ ರಾಜ್ಯ ಸಭಾ ಸದಸ್ಯರಾದ ಇಳಯರಾಜ ಅವರನ್ನು ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಪ್ರವೇಶ ಮಾಡಲು ನಿರಾಕರಿಸಿದ ಘಟನೆಯು ನಿಜಕ್ಕೂ ಅವಮಾನಕರ ಸಂಗತಿ ಆಗಿದ್ದು, ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯು ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದವರ ಸ್ಥಿತಿಯೇ ಹೀಗಿದ್ದರೆ, ಸಾಮಾನ್ಯರಾಗಿ ಜೀವಿಸುತ್ತಿರುವ ಪರಿಶಿಷ್ಟ ಸಮುದಾಯಗಳ ಪರಿಸ್ಥಿತಿ ಏನಾಗಿರಬೇಕು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:26 am, Tue, 17 December 24