
ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದ ಶೂಟಿಂಗ್ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ (Jr NTR) ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಗುರುವಾರ (ಆಗಸ್ಟ್ 13) ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಆಗಿದ್ದಾರೆ. ವೇಗವಾಗಿ ಚೇತರಿಸಿಕೊಳ್ಳಲು ಅವರು ಇನ್ನು ಕೆಲವು ದಿನಗಳ ಕಾಲ ಪುನಶ್ಚೇತನ (Rehabilitation) ಪ್ರಕ್ರಿಯೆಗೆ ಒಳಗಾಗಲಿದ್ದಾರೆ. ಆಸ್ಪತ್ರೆಯಿಂದ ಹೊರ ಬರುವ ವೇಳೆ ಅವರು ನಗುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ಜೂನಿಯರ್ ಎನ್‌ಟಿಆರ್ ಅವರಿಗೆ ಆರ್ಥ್ರೋಸ್ಕೊಪಿಕ್ ಶೋಲ್ಡರ್ ಸರ್ಜರಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಎನ್‌ಟಿಆರ್ ಫೋಟೋಗೆ ಪೋಸ್ ನೀಡಿದ್ದಾರೆ. ಬಲಗೈಗೆ ಬೆಂಬಲಕ್ಕಾಗಿ ಬ್ಯಾಂಡೇಜ್ ಧರಿಸಿದ್ದ ಅವರು, ಎಡಗೈಯಲ್ಲಿ ಥಂಬ್ಸ್ ಅಪ್ ತೋರಿಸುತ್ತಾ ಮುಗುಳುನಗುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫೋಟೋ ಹಂಚಿಕೊಂಡಿರುವ ಕಿಮ್ಸ್ ಆಸ್ಪತ್ರೆ, ‘ನಟ ಎನ್‌ಟಿಆರ್ ಅವರಿಗೆ ಡಾ. ಆರ್.ಎ. ಪೂರ್ಣಚಂದ್ರ ತೇಜಸ್ವಿ ಹಾಗೂ ಡಾ. ನಿತಿನ್ ಬೆಜ್ಜಂಕಿ ಅವರ ನೇತೃತ್ವದಲ್ಲಿ ಯಶಸ್ವಿ ಆರ್ಥ್ರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ನೆರವೇರಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಲು ಸಂತೋಷವಾಗುತ್ತದೆ’ ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದೆ.
ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಬಿ. ಭಾಸ್ಕರ ರಾವ್ ಅವರು ಎನ್‌ಟಿಆರ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಎನ್‌ಟಿಆರ್ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು 2ರಿಂದ 3 ತಿಂಗಳು ಸಮಯ ಹಿಡಿಯಲಿದೆ ಎಂದು ಆಸ್ಪತ್ರೆಯ ಹೆಲ್ತ್ ಬುಲೆಟಿನ್ ತಿಳಿಸಿದೆ. ಹಾಗಾಗಿ ಅವರು ಸಿನಿಮಾಗಳ ಶೂಟಿಂಗ್ನಲ್ಲಿ ಸದ್ಯಕ್ಕೆ ಪಾಲ್ಗೊಳ್ಳಲು ಸಾಧ್ಯವಿಲ್ಲ.
ಇದನ್ನೂ ಓದಿ: ಜೂ ಎನ್‌ಟಿಆರ್ ಸಿನಿಮಾ: ಬಿಡುಗಡೆ ತಡೆಯುವುದಾಗಿ ಎಚ್ಚರಿಸಿದ ರಾಜಕಾರಣಿ
ಬುಧವಾರ (ಆಗಸ್ಟ್ 12) ಶಸ್ತ್ರಚಿಕಿತ್ಸೆ ಮುಗಿದ ಬಳಿಕ ತಮಗೆ ಬೆಂಬಲವಾಗಿ ನಿಂತ ಅಭಿಮಾನಿಗಳಿಗೆ ಎನ್‌ಟಿಆರ್ ಧನ್ಯವಾದ ತಿಳಿಸಿದ್ದರು. ‘ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಗಳಿಗೆ ನಾನು ಚಿರಋಣಿ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಕಿಮ್ಸ್ ಆಸ್ಪತ್ರೆಯ ಅದ್ಭುತ ವೈದ್ಯರ ತಂಡಕ್ಕೆ ಧನ್ಯವಾದಗಳು. ನನ್ನ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳ ಬೆಂಬಲ ನನಗೆ ಪ್ರತಿದಿನ ಶಕ್ತಿ ನೀಡುತ್ತದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.