
ಜೂ ಎನ್ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಖುದ್ದು ಜೂ ಎನ್ಟಿಆರ್ ಗೆ ಹಾಗೂ ಅವರ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ. ‘ಡ್ರ್ಯಾಗನ್’ ಸಿನಿಮಾದ ಬಳಿಕವೂ ಸಹ ಜೂ ಎನ್ಟಿಆರ್ ಅವರಿಗೆ ಸಾಕಷ್ಟು ಒಳ್ಳೆಯ ಲೈನಪ್ಗಳು ಇವೆ. ವಿಶೇಷವಾಗಿ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಭರ್ಜರಿ ಆಕ್ಷನ್ ಸಿನಿಮಾನಲ್ಲಿ ಜೂ ಎನ್ಟಿಆರ್ ನಟನೆ ಮಾಡಲಿದ್ದಾರೆ. ಅದರ ಬಳಿಕ ಜೂ ಎನ್ಟಿಆರ್ ನಟಿಸಲಿರುವ ಸಿನಿಮಾವನ್ನು ತಮಿಳಿನ ಸ್ಟಾರ್ ನಿರ್ದೇಶಕರೊಬ್ಬರು ನಿರ್ದೇಶನ ಮಾಡುತ್ತಿರುವುದು ಮತ್ತೊಂದು ವಿಶೇಷ.
ಜೂ ಎನ್ಟಿಆರ್ ಅವರು ತ್ರಿವಿಕ್ರಮ್ ಶ್ರೀನಿವಾಸ್ ಬಳಿಕ ನಟಿಸಲಿರುವ ಹೊಸ ಸಿನಿಮಾ ಅನ್ನು ತಮಿಳಿನ ನಿರ್ದೇಶಕ ನೆಲ್ಸನ್ ನಿರ್ದೇಶಿಸಲಿದ್ದಾರೆ. ರಜನೀಕಾಂತ್ ನಿರ್ದೇಶನದ ‘ಜೈಲರ್’ ಮತ್ತು ‘ಜೈಲರ್ 2’ ಸಿನಿಮಾಗಳನ್ನು ನಿರ್ದೇಶಿಸಿರುವ ನೆಲ್ಸನ್ ಪಕ್ಕಾ ಆಕ್ಷನ್, ಮಾಸ್ ಎಂಟರ್ಟೈನರ್ಗಳನ್ನು ನೀಡುವುದರಲ್ಲಿ ನಿಸ್ಸೀಮರು. ಈಗ ಅವರು ಜೂ ಎನ್ಟಿಆರ್ ಜೊತೆಗೆ ಕೈ ಜೋಡಿಸಿದ್ದು, ಸಿನಿಮಾದ ಯೋಜನೆ ಬಹುತೇಕ ಅಂತಿಮಗೊಂಡಿದೆ.
ಅಸಲಿಗೆ 2025ರಲ್ಲೇ ನೆಲ್ಸನ್ ಅವರು ಜೂ ಎನ್ಟಿಆರ್ಗಾಗಿ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಆದರೆ ಜೂ ಎನ್ಟಿಆರ್ ಅವರು ‘ಡ್ರ್ಯಾಗನ್’ ಸಿನಿಮಾನಲ್ಲಿ ಬ್ಯುಸಿಯಾಗಿದ್ದ ಕಾರಣದಿಂದಾಗಿ ಆ ಸಿನಿಮಾ ಯೋಜನೆ ಮುಂದೂಡಲ್ಪಟ್ಟಿತ್ತು. ಆ ಬಳಿಕ ಹರಿದಾಡಿದ್ದ ಕೆಲ ಸುದ್ದಿಗಳ ಪ್ರಕಾರ, ನೆಲ್ಸನ್ ಹಾಗೂ ಜೂ ಎನ್ಟಿಆರ್ ಸಿನಿಮಾ ಚರ್ಚೆಯ ಹಂತದಲ್ಲಿಯೇ ನಿಂತು ಹೋಗಿದೆ ಎಂದೆಲ್ಲ ಹೇಳಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಜೂ ಎನ್ಟಿಆರ್ ಅವರು ನೆಲ್ಸನ್ ಜೊತೆಗೆ ಕೆಲಸ ಮಾಡುವ ವಿಷಯವನ್ನು ಖುದ್ದು ನಿರ್ಮಾಪಕ ನಾಗವಂಶಿ ಅವರೇ ಖಚಿತಪಡಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳವನ್ನು ಅವರೇ ಹೂಡಲಿದ್ದಾರೆ.
ಇದನ್ನೂ ಓದಿ:ಜೂ ಎನ್ಟಿಆರ್ ಹೊಸ ಸಿನಿಮಾದ ಬಗ್ಗೆ ಹೊರಬಿತ್ತು ಪ್ರಮುಖ ಅಪ್ಡೇಟ್
ಜೂ ಎನ್ಟಿಆರ್ ಅವರು ಮುಂದಿನ ಎರಡು ಮೂರು ವರ್ಷಗಳಿಗೆ ಬ್ಯುಸಿ ಆಗಿಬಿಟ್ಟಿದ್ದಾರೆ. ‘ಡ್ರ್ಯಾಗನ್’ ಬಳಿಕ ತ್ರಿವಿಕ್ರಮ್ ಜೊತೆಗೆ ‘ಗಾಡ್ ಆಫ್ ವಾರ್’ ಆ ಬಳಿಕ ನೆಲ್ಸನ್ ಜೊತೆಗೆ ಸಿನಿಮಾ. ಈ ಸಿನಿಮಾಗಳ ಬಳಿಕ ಬಹುಷಃ ‘ದೇವರ 2’ ಸಿನಿಮಾ ಮಾಡಬಹುದು ಎನ್ನಲಾಗುತ್ತಿದೆ. ಇನ್ನುಳಿದಂತೆ ಜೂ ಎನ್ಟಿಆರ್ ಅವರು ತಮಿಳಿನ ವೆಟ್ರಿಮಾರನ್ ನಿರ್ದೇಶನದ ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿತ್ತು. ಆದರೆ ಅದು ಇನ್ನೂ ಖಾತ್ರಿ ಆಗಿಲ್ಲ. ಜೊತೆಗೆ ಹಿಂದಿಯ ಯಶ್ ರಾಜ್ ಫಿಲಮ್ಸ್, ಜೂ ಎನ್ಟಿಆರ್ ಅವರಿಗಾಗಿ ಪ್ರತ್ಯೇಕ ಸೋಲೊ ಆಕ್ಷನ್ ಸಿನಿಮಾ ಸಹ ನಿರ್ಮಾಣ ಮಾಡಲಿದೆ ಎಂಬ ಮಾತುಗಳು ಸಹ ಹರಿದಾಡಿದ್ದವು. ಅದೂ ಸಹ ಇನ್ನಷ್ಟೆ ಖಾತ್ರಿ ಆಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ