
‘ಕೆಜಿಎಫ್: ಚಾಪ್ಟರ್ 2’, ‘ವಿಕ್ರಾಂತ್ ರೋಣ’, ‘ಕಾಂತಾರ’ ಸಿನಿಮಾಗಳು ಅಬ್ಬರಿಸಿದ ಪರಿ ಕಂಡು ಕನ್ನಡ ಚಿತ್ರರಂಗದ ಬಗ್ಗೆ ಇಡೀ ಭಾರತೀಯ ಸಿನಿಮಾರಂಗ ಮಾತನಾಡಿಕೊಳ್ಳುವಂತೆ ಆಯಿತು. ಅದೇ ಮಾದರಿಯಲ್ಲಿ ‘ಕಬ್ಜ’ ಚಿತ್ರ (Kabzaa Movie) ಕೂಡ ಸೌಂಡು ಮಾಡುತ್ತಿದೆ. ಆರ್. ಚಂದ್ರು (R Chandru) ಅವರ ಸಾರಥ್ಯದಲ್ಲಿ ಬಂದಿರುವ ಈ ಚಿತ್ರ ಇಂದು (ಮಾರ್ಚ್ 17) ಗ್ರ್ಯಾಂಡ್ ಆಗಿ ತೆರೆಕಂಡಿದೆ. ವಿಶ್ವಾದ್ಯಂತ 4000 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ‘ಕಬ್ಜ’ ಪ್ರದರ್ಶನ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ಮಲಯಾಳಂ, ಹಿಂದಿ, ತಮಿಳಿನಲ್ಲಿ ಈ ಚಿತ್ರ ರಿಲೀಸ್ ಆಗಿದೆ. ಕನ್ನಡಿಗರ ಹಾಗೆಯೇ ಪರಭಾಷೆಯ ಪ್ರೇಕ್ಷಕರು ಕೂಡ ಫಸ್ಟ್ ಡೇ ಫಸ್ಟ್ ಶೋ ನೋಡಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಉಪೇಂದ್ರ ಅವರ ಅಭಿಮಾನಿಗಳಿಗೆ ಈ ಸಿನಿಮಾ ಮಸ್ತ್ ಮನರಂಜನೆ ನೀಡಿದೆ. ಪ್ರೇಕ್ಷಕರು ಹಂಚಿಕೊಂಡ ‘ಕಬ್ಜ’ ಟ್ವಿಟರ್ ವಿಮರ್ಶೆ (Kabzaa Twitter Review) ಇಲ್ಲಿದೆ..
ಕಿಚ್ಚ ಸುದೀಪ್ ಅವರು ‘ಕಬ್ಜ’ ಸಿನಿಮಾದ ಆರಂಭದಲ್ಲೇ ಎಂಟ್ರಿ ನೀಡುತ್ತಾರೆ. ಅವರ ಪಾತ್ರದ ಮ್ಯಾನರಿಸಂ, ಡೈಲಾಗ್ ಡೆಲಿವರಿ ಅಭಿಮಾನಿಗಳಿಗೆ ಇಷ್ಟ ಆಗಿದೆ. ಸಿನಿಮಾದುದ್ದಕ್ಕೂ ಅವರ ಧ್ವನಿಯಲ್ಲೇ ಕಥೆ ನಿರೂಪಿತವಾಗುತ್ತದೆ. ಕ್ಲೈಮ್ಯಾಕ್ಸ್ನಲ್ಲೂ ಅವರು ಅಬ್ಬರಿಸುತ್ತಾರೆ. ಹಾಗಾಗಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಈ ಚಿತ್ರ ಇಷ್ಟ ಆಗಿದೆ.
ಬಹುತೇಕ ಎಲ್ಲರಿಗೂ ‘ಕಬ್ಜ’ ಸಿನಿಮಾದ ಕ್ಲೈಮ್ಯಾಕ್ಸ್ ಇಷ್ಟ ಆಗಿದೆ. ಪ್ರತಿ ಹಂತದಲ್ಲೂ ಕೌತುಕ ಮೂಡಿಸುವಂತಹ ಶಕ್ತಿ ಈ ಚಿತ್ರಕ್ಕಿದೆ. ಉಪೇಂದ್ರ, ಶ್ರೀಯಾ ಶರಣ್, ಮುರಳಿ ಶರ್ಮಾ ಅವರ ಕಾಂಬಿನೇಷನ್ ಚೆನ್ನಾಗಿದೆ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.
ಶಿವರಾಜ್ಕುಮಾರ್ ಅವರು ಕುತೂಹಲಭರಿತವಾದ ಪಾತ್ರದಲ್ಲಿ ಪ್ರೇಕ್ಷಕರ ಎದುರು ಕಾಣಿಸಿಕೊಳ್ಳುತ್ತಾರೆ. ‘ನೀವು ಏನನ್ನು ಬೇಕಿದ್ದರೂ ನಿರ್ಲಕ್ಷಿಸಬಹುದು. ಆದರೆ ಶಿವಣ್ಣನ ಎಂಟ್ರಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದು ಶಿವರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಗಳು ಟ್ವಿಟರ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
‘ಕಬ್ಜ’ ಚಿತ್ರದಲ್ಲಿ ತಾಂತ್ರಿಕ ಗುಣಮಟ್ಟ ಸೂಪರ್ ಆಗಿದೆ. ಎಜೆ ಶೆಟ್ಟಿ ಅವರ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ, ರವಿ ಬಸ್ರೂರು ಅವರ ಸಂಗೀತ ನಿರ್ದೇಶನ, ಮಹೇಶ್ ರೆಡ್ಡಿ ಅವರ ಸಂಕಲನ ಗಮನ ಸೆಳೆಯುತ್ತಿದೆ. ಹಾಗಾಗಿ ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ ಎಂಜಾಯ್ ಮಾಡಬೇಕು ಎನ್ನುತ್ತಿದ್ದಾರೆ ಫ್ಯಾನ್ಸ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:30 pm, Fri, 17 March 23