ವಿಚ್ಛೇದನದಿಂದ ಬ್ಯಾಂಕ್ ಬ್ಯಾಲೆನ್ಸ್ ಶೂನ್ಯವಾಗಿತ್ತು ಎಂದ ಕಮಲ್ ಹಾಸನ್; ತಿರುಗೇಟು ನೀಡಿದ ಮಾಜಿ ಪತ್ನಿ

ಮೊದಲ ಪತ್ನಿ ವಾಣಿ ಗಣಪತಿ ಅವರಿಗೆ ಜೀವನಾಂಶ ನೀಡಿ ಬ್ಯಾಂಕ್ ಬ್ಯಾಲೆನ್ಸ್ ಶೂನ್ಯವಾಗಿತ್ತು ಎಂದು ನಟ ಕಮಲ್ ಹಾಸನ್ ಹೇಳಿದ್ದರು. ಈ ಹೇಳಿಕೆಯನ್ನು ತಳ್ಳಿಹಾಕಿರುವ ವಾಣಿ, ಅನುಕಂಪ ಗಿಟ್ಟಿಸಿಕೊಳ್ಳಲು ಕಮಲ್ ಸುಳ್ಳು ಹೇಳುತ್ತಿದ್ದಾರೆ ಹಾಗೂ ಮದುವೆಯಾದಾಗಿನಿಂದಲೂ ಬಾಡಿಗೆ ಮನೆಯಲ್ಲೇ ಇದ್ದೆವು ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ವಿಚ್ಛೇದನದಿಂದ ಬ್ಯಾಂಕ್ ಬ್ಯಾಲೆನ್ಸ್ ಶೂನ್ಯವಾಗಿತ್ತು ಎಂದ ಕಮಲ್ ಹಾಸನ್; ತಿರುಗೇಟು ನೀಡಿದ ಮಾಜಿ ಪತ್ನಿ
ಕಮಲ್-ವಾಣಿ

Updated on: Nov 18, 2026 | 1:03 PM

ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಮತ್ತು ವಿವಾದಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಬದುಕಿನ ವಿಚಾರವಾಗಿಯೂ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಮೊದಲ ಪತ್ನಿ ವಾಣಿ ಗಣಪತಿ ಅವರಿಂದ ವಿಚ್ಛೇದನ ಪಡೆದ ಬಳಿಕ ತಾವು ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದ್ದೆ ಎಂದು ಕಮಲ್ ಹೇಳಿಕೊಂಡಿದ್ದರು. ಈ ಹೇಳಿಕೆಗೆ ವಾಣಿ ಗಣಪತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೇವಲ ಅನುಕಂಪ ಗಿಟ್ಟಿಸಿಕೊಳ್ಳುವ ತಂತ್ರ ಎಂದು ತಿರುಗೇಟು ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದರು. ಜೀವನಾಂಶ ನೀಡಿದ ಬಳಿಕ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಶೂನ್ಯಕ್ಕೆ ಇಳಿದಿತ್ತು ಎಂದು ಅವರು ಹೇಳಿದ್ದರು. ಹಣವಿಲ್ಲದೆ ಮಗಳು ಶ್ರುತಿ ಹಾಸನ್ ಜೊತೆ ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಬೇಕಾಯಿತು ಎಂದಿದ್ದರು. ವೃತ್ತಿಜೀವನ ಉತ್ತುಂಗದಲ್ಲಿದ್ದ ಕಾರಣ ಮತ್ತೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಯಿತು ಎಂದು ಕಮಲ್ ವಿವರಿಸಿದ್ದರು.

Loading...

ಕಮಲ್ ಅವರ ಈ ಮಾತುಗಳನ್ನು ಮಾಜಿ ಪತ್ನಿ ವಾಣಿ ಗಣಪತಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ‘ಕಮಲ್ ಹೇಳಿಕೆಗಳು ಅತ್ಯಂತ ಬಾಲಿಶವಾಗಿವೆ. ವಿಚ್ಛೇದನದ ಸಮಯದಲ್ಲಿ ಕಮಲ್ ಬಳಿ ಸ್ವಂತ ಮನೆಯೇ ಇರಲಿಲ್ಲ. ಮದುವೆಯಾದಾಗಿನಿಂದಲೂ ತಾವಿಬ್ಬರು ಬಾಡಿಗೆ ಮನೆಗಳಲ್ಲೇ ವಾಸವಿದ್ದೆವು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಅರಮನೆಯಂತಹ ಮನೆಯಿಂದ ಬಾಡಿಗೆ ಮನೆಗೆ ಹೋದೆ ಎಂಬುದು ಶುದ್ಧ ಸುಳ್ಳು. ಮಗಳ ಮುಂದೆ ತ್ಯಾಗಮಯಿ ತಂದೆಯಂತೆ ಬಿಂಬಿಸಿಕೊಳ್ಳಲು ಕಮಲ್ ಈ ರೀತಿ ಮಾತನಾಡುತ್ತಿದ್ದಾರೆ. ಕಮಲ್ ಎಂದಿಗೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಅವರು ದಿವಾಳಿಯಾಗಿದ್ದರೆ ಅದಕ್ಕೆ ಬೇರೆ ಕಾರಣಗಳಿರಬಹುದು’ ಎಂದು ವಾಣಿ ಗಣಪತಿ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: 22 ವರ್ಷದ ಹಿಂದೆ ವಿವಾದಕ್ಕೊಳಗಾಗಿದ್ದ ಟೈಟಲ್ ಅನ್ನೇ ಮತ್ತೆ ಕೈಗೆತ್ತಿಕೊಂಡ ಕಮಲ್ ಹಾಸನ್

1978ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಕಮಲ್ ಮತ್ತು ವಾಣಿ 1988ರಲ್ಲಿ ವಿಚ್ಛೇದನ ಪಡೆದರು. ಬಳಿಕ ಕಮಲ್ ನಟಿ ಸಾರಿಕಾ ಅವರನ್ನು ವಿವಾಹವಾಗಿ 2004ರಲ್ಲಿ ಅವರಿಂದಲೂ ದೂರವಾದರು. ನಂತರ ನಟಿ ಗೌತಮಿ ಜೊತೆ 13 ವರ್ಷಗಳ ಕಾಲ ಸಹಜೀವನ ನಡೆಸಿದ್ದರು. ವಿಚ್ಛೇದನದ ದಶಕಗಳ ಬಳಿಕವೂ ಕಮಲ್ ಸಹೋದರ ಚಾರುಹಾಸನ್ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ವಾಣಿ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us