
ಕೀರ್ತಿ ಸುರೇಶ್, ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರತಿಭಾವಂತ ನಟಿ. ದಕ್ಷಿಣದ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಜೊತೆಗೆ ಕೆಲ ಬಾಲಿವುಡ್ ಪ್ರಾಜೆಕ್ಟ್ಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಒಂದರ ಹಿಂದೊಂದು ವಿವಾದದಲ್ಲಿ ಅನವಶ್ಯಕವಾಗಿ ಅವರ ಹೆಸರು ಕೇಳಿ ಬರುತ್ತಿದೆ. ನಟಿ ರಾಧಿಕಾ ಆಪ್ಟೆ, ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಮಾಡಿದ ಕಮೆಂಟ್ ಕುರಿತಾಗಿ ಕೀರ್ತಿ ಸುರೇಶ್ ಅವರನ್ನು ಕೆಲವರು ಟೀಕೆ ಮಾಡಿದ್ದರು. ಆ ಬಗ್ಗೆ ಕೀರ್ತಿ ಸುರೇಶ್ ಸ್ಪಷ್ಟನೆ ಕೊಟ್ಟಾಗಿದೆ. ಅದರ ಬೆನ್ನಲ್ಲೆ, ನಿರ್ದೇಶಕರೊಬ್ಬರು ಕೀರ್ತಿ ಸುರೇಶ್ ಅವರನ್ನು ಅನುಚಿತವಾಗಿ ಸ್ಪರ್ಷಿಸಿದರು ಎನ್ನಲಾಗುತ್ತಿದೆ. ಆದರೆ ಅದಕ್ಕೆ ಖುದ್ದು ಕೀರ್ತಿ ಸುರೇಶ್ ಖಡಕ್ ಆದ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಸ್ಟಾರ್ ನಟಿ ಕೀರ್ತಿ ಸುರೇಶ್ ತಮಿಳಿನ ಜನಪ್ರಿಯ ನಿರ್ದೇಶಕ ಮತ್ತು ನಟ ಮಿಸ್ಕಿನ್ ಜೊತೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ‘ಸತ್ಯವಾನ್ ಸಾವಿತ್ರಿ’ ಸಿನಿಮಾದ ಪತ್ರಿಕಾಗೋಷ್ಠಿ ಅದಾಗಿದ್ದು, ಸಿನಿಮಾನಲ್ಲಿ ಕೀರ್ತಿ ಸುರೇಶ್ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ಮಿಸ್ಕಿನ್ ಸಹ ಪ್ರಮುಖವಾದ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಮಿಸ್ಕಿನ್ ಅವರು ‘ಡೊರೊತಿ’ ಸಿನಿಮಾನಲ್ಲಿ ಕೀರ್ತಿ ಸುರೇಶ್ ಅವರ ನಟನೆಯನ್ನು ಕೊಂಡಾಡುತ್ತಾ, ಅವರ ಧೈರ್ಯವನ್ನು ಹೊಗಳಿದರು. ಜೊತೆಗೆ ಮೆಚ್ಚುಗೆಯಾಗಿ ಒಂದು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದರು. ಪಕ್ಕದಲ್ಲೇ ಕೂತಿದ್ದ ಅವರ ಮೊಣಕಾಲನ್ನು ಮುಟ್ಟಿದರು.
ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಮಿಸ್ಕಿನ್ ಅವರು ಕೀರ್ತಿ ಅವರೊಟ್ಟಿಗೆ ಮಾತನಾಡುತ್ತಾ, ಅಭಿನಂದಿಸುತ್ತಾ, ಅವರ ಮೊಣಕಾಲಿನ ಕೈ ಇಟ್ಟರು. ಆ ವಿಡಿಯೋ ಅನ್ನು ಕೆಲವರು ವೈರಲ್ ಮಾಡಿದ್ದು, ಮಿಸ್ಕಿನ್, ಕೀರ್ತಿ ಸುರೇಶ್ ಅನ್ನು ಕೆಟ್ಟದಾಗಿ ಸ್ಪರ್ಷಿಸಿದರು. ಖುದ್ದು ಕೀರ್ತಿ ಸುರೇಶ್ ಆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎಂಬ ಒಕ್ಕಣೆಯೊಂದಿಗೆ ವಿಡಿಯೋ ಹಂಚಿಕೊಂಡಿದ್ದರು. ಒಬ್ಬ ನೆಟ್ಟಿಗನಂತೂ ‘ಸಿನಿಮಾಗಳಲ್ಲಿ ಹೀರೋಗಳ ಜೊತೆ ನಟಿಸುವಾಗ ಯಾವುದೇ ರೀತಿಯ ಸ್ಪರ್ಶಕ್ಕೂ ನಗುತ್ತಿರುತ್ತಾರೆ, ಅಂಥದ್ದರಲ್ಲಿ ಮಿಸ್ಕಿನ್ ಮುಟ್ಟಿದ್ದಕ್ಕೆ ಮಾತ್ರ ಯಾಕೆ ಹಾಗೆ ಮುಖ ಗಂಟಿಕ್ಕಿದರು’ ಎಂದು ಪ್ರಶ್ನಿಸಿದ್ದ.
ಈ ಕಾಮೆಂಟ್ಗಳು ಕೀರ್ತಿ ಸುರೇಶ್ ಅವರ ಗಮನಕ್ಕೆ ಬಂದ ತಕ್ಷಣ ಅವರು ನೇರವಾಗಿ ಪ್ರತಿಕ್ರಿಯಿಸಿದ್ದು, ‘ನನ್ನ ಮುಖದಲ್ಲಿ ಅಸಹಜತೆ ಕಂಡಿದ್ದು ಹೇಗೆ ಎಂದು ಕೀರ್ತಿ ಪ್ರಶ್ನಿಸಿದರು. ಅಲ್ಲದೆ, ಮಿಸ್ಕಿನ್ ಅವರೊಂದಿಗೆ ತಮಗೆ ತಂದೆ-ಮಗಳಂತಹ ಸಂಬಂಧ ಇದೆ ಎಂಬ ವಿಷಯವನ್ನೂ ನೆನಪಿಸಿದರು. ಅವರಿಬ್ಬರ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡದೆ, ವಿಡಿಯೋ ಆಧಾರದ ಮೇಲೆ ತಪ್ಪಾಗಿ ಅರ್ಥೈಸಿಕೊಳ್ಳುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:‘ಅಕ್ಕ’ ವೆಬ್ ಸರಣಿಯಲ್ಲಿ ಬೋಲ್ಡ್ ಅವತಾರದಲ್ಲಿ ಮಿಂಚಿದ ಕೀರ್ತಿ ಸುರೇಶ್
ಅಷ್ಟಕ್ಕೇ ನಿಲ್ಲಿಸದೆ ಮತ್ತೊಂದು ಪ್ರಮುಖ ಅಂಶವನ್ನೂ ಪ್ರಸ್ತಾಪಿಸಿದರು. ಒಂದು ವೇಳೆ ನಾನು ನಿಜವಾಗಿಯೂ ಅಸಹಜತೆಯಿಂದ ಇದ್ದೇನೆ ಎಂದೇ ಭಾವಿಸಿದರೂ, ಸಿನಿಮಾಗಳಲ್ಲಿ ನಟಿಸುವಾಗ ಹೀರೋಗಳು ಮುಟ್ಟುತ್ತಾರೆ ಎಂಬ ಕಾರಣಕ್ಕೆ ಹೊರಗಡೆ ಯಾರಾದರೂ ಹಾಗೆ ನಡೆದುಕೊಂಡರೆ ನನಗೆ ಕಂಫರ್ಟಬಲ್ ಆಗಿರಬೇಕಾ? ಎಂದು ಆ ನೆಟ್ಟಿಗನನ್ನು ತರಾಟೆಗೆ ತೆಗೆದುಕೊಂಡರು. ಸಿನಿಮಾಗಳಲ್ಲಿ ನಟಿಸುವುದು ಮತ್ತು ವೈಯಕ್ತಿಕ ಬದುಕಿನಲ್ಲಿ ಒಬ್ಬರ ಇತಿಮಿತಿಗಳನ್ನು ಗೌರವಿಸುವುದು ಎರಡೂ ಬೇರೆ ಬೇರೆ ವಿಷಯಗಳು ಎಂದು ತಮ್ಮ ಉತ್ತರದ ಮೂಲಕ ಸ್ಪಷ್ಟಪಡಿಸಿದರು. ಕೀರ್ತಿ ಸುರೇಶ್ ಕೊಟ್ಟ ಖಡಕ್ ಉತ್ತರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ಅವರ ಪ್ರತಿಕ್ರಿಯೆಯ ಬೆನ್ನಲ್ಲೇ ಆ ನೆಟ್ಟಿಗ ತನ್ನ ಪೋಸ್ಟ್ ಡಿಲೀಟ್ ಮಾಡಿದ್ದಾನೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ