2018 Movie: ‘ಈ ಮಲಯಾಳಂ ಸಿನಿಮಾ ಕನ್ನಡಿಗರ ಹೃದಯ ಗೆದ್ದಿದೆ’: ‘2018’ ಚಿತ್ರಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ

Kichcha Sudeep: ಒಳ್ಳೆಯ ಸಿನಿಮಾಗಳಿಗೆ ಕಿಚ್ಚ ಸುದೀಪ್ ಅವರು ಯಾವಾಗಲೂ ಬೆಂಬಲ ನೀಡುತ್ತಾರೆ. ಮಾನವೀಯತೆಯ ಕಥೆ ಹೊಂದಿರುವ ‘2018’ ಸಿನಿಮಾ ಬಗ್ಗೆ ಅವರು ಈಗ ಮೆಚ್ಚುಗೆ ಸೂಚಿಸಿದ್ದಾರೆ.

2018 Movie: ‘ಈ ಮಲಯಾಳಂ ಸಿನಿಮಾ ಕನ್ನಡಿಗರ ಹೃದಯ ಗೆದ್ದಿದೆ’: ‘2018’ ಚಿತ್ರಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ
2018 ಸಿನಿಮಾ ಪೋಸ್ಟರ್​, ಸುದೀಪ್​

Updated on: Jun 04, 2023 | 9:16 AM

ಮಲಯಾಳಂನ ‘2018’ ಸಿನಿಮಾ (2018 Movie) ಭಾರಿ ಸದ್ದು ಮಾಡುತ್ತಿದೆ. ನೈಜ ಘಟನೆಗಳನ್ನು ಆಧರಿಸಿ ತಯಾರಾದ ಈ ಸಿನಿಮಾಗೆ ಪ್ರೇಕ್ಷಕರು ಮನ ಸೋತಿದ್ದಾರೆ. ಕಿಚ್ಚ ಸುದೀಪ್​ (Kichcha Sudeep) ಕೂಡ ಈ ಚಿತ್ರದ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ‘2018’ ಮಾಡಿದ ಸಾಧನೆಗಾಗಿ ಸುದೀಪ್​ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮೊದಲು ಮಲಯಾಳಂನಲ್ಲಿ ಮಾತ್ರ ಬಿಡುಗಡೆಯಾದ ಈ ಸಿನಿಮಾ ನಂತರ ತೆಲುಗು, ಕನ್ನಡ, ಹಿಂದಿ, ತಮಿಳು ಭಾಷೆಗಳಿಗೆ ಡಬ್​ ಆಗಿ ತೆರೆ ಕಂಡಿತು. ಕನ್ನಡಿಗರು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ನೂರಾರು ಕೋಟಿ ರೂಪಾಯಿ ಗಳಿಸುವ ಮೂಲಕ ಮಲಯಾಳಂ (Mollywood) ಚಿತ್ರರಂಗದಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆದಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಟ್ವೀಟ್​ ಮಾಡಿ, ಶುಭ ಕೋರಿದ್ದಾರೆ.

‘ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಬೆಳ್ಳಿತೆರೆಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಕೇರಳ ಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ ಬಸ್ಟರ್ ಆಗಿದೆ. ‘2018’ ಸಿನಿಮಾ ಕನ್ನಡಿಗರ ಹೃದಯವನ್ನೂ ಗೆಲ್ಲುತ್ತಿದೆ. ಅಭಿನಂದನೆಗಳು’ ಎಂದು ಸುದೀಪ್​ ಅವರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ‘ಇದು ನಿಜವಾದ ಕೇರಳ ಸ್ಟೋರಿ’ ಎಂದು ಅಭಿಮಾನಿಗಳು ಕಮೆಂಟ್​ ಬಾಕ್ಸ್​ನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ನಿಮ್ಮ ಪ್ರೀತಿಗೆ ಧನ್ಯವಾದಗಳು. ಇಷ್ಟೇ ನಮಗೆ ಬೇಕಿರುವುದು’ ಎಂದು ಕೇರಳದಲ್ಲಿನ ಫ್ಯಾನ್ಸ್​ ಕೂಡ ಕಮೆಂಟ್​ ಮಾಡಿದ್ದಾರೆ.

‘2018’ ಚಿತ್ರದ ಕಥೆ ಏನು?

2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹವನ್ನು ಆಧರಿಸಿ ‘2018’ ಸಿನಿಮಾ ಸಿದ್ಧವಾಗಿದೆ. ಹಲವರ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟದ ಘಟನೆಗಳನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ. ಅತಿ ಕಷ್ಟದ ಸಂದರ್ಭದಲ್ಲಿ ಕೇರಳದ ಪ್ರತಿಯೊಬ್ಬರು ಹೇಗೆ ನಡೆದುಕೊಂಡರು ಎಂಬ ವಿವರ ಈ ಸಿನಿಮಾದಲ್ಲಿ. ‘ಪ್ರತಿಯೊಬ್ಬರೂ ಹೀರೋ’ ಎಂಬ ಟ್ಯಾಗ್​ಲೈನ್​ ಗಮನ ಸೆಳೆದಿದೆ. 2018ರ ಪ್ರವಾಹದಲ್ಲಿ ಕೇರಳದ 400ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಅನೇಕರು ನಾಪತ್ತೆಯಾದರು. 1924ರ ಬಳಿಕ ಕೇರಳದಲ್ಲಿ ಉಂಟಾದ ಅತಿ ಭೀಕರ ಪ್ರವಾಹ ಅದು.

ಇದನ್ನೂ ಓದಿ: Kichcha Sudeep: ಸುದೀಪ್​ ಹೊಸ ಸಿನಿಮಾ ಬಗ್ಗೆ ಸಿಕ್ತು ಅಪ್​ಡೇಟ್​; ‘ಕಬಾಲಿ’ ನಿರ್ಮಾಪಕರ ಜೊತೆ ಕೈ ಜೋಡಿಸಿದ ಕಿಚ್ಚ

ಈವರೆಗೂ 160 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಮಲಯಾಳಂ ಚಿತ್ರರಂಗದ ಅತಿ ದೊಡ್ಡ ಬ್ಲಾಕ್​ ಬಸ್ಟರ್​ ಸಿನಿಮಾ ಎಂಬ ಖ್ಯಾತಿಗೆ ‘2018’ ಒಳಗಾಗಿದೆ. ಟೊವಿನೋ ಥಾಮಸ್​ ಜೊತೆ ಆಸಿಫ್​ ಅಲಿ, ಅಪರ್ಣಾ ಬಾಲಮುರಳಿ, ವಿನೀತ್​ ಶ್ರೀನಿವಾಸನ್​, ಕಲೈಯರಸನ್​, ಸುದೇಶ್​, ಅಜು ವರ್ಗೀಸ್​, ತನ್ವಿ ರಾಮ್​, ಗೌತಮಿ ನಾಯರ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೂಡ್​ ಆಂಥೊನಿ ಜೋಸೆಫ್​ ಅವರು ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us