ನಟ ರಜನಿಕಾಂತ್ ಅವರು ಚಿತ್ರರಂಗದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆದರೆ ಒಂದಷ್ಟು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿವೆ. ರಜನಿಕಾಂತ್ ನಟನೆಯ ‘ಲಿಂಗ’ ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಕರ್ನಾಟಕದಲ್ಲಿ ಈ ಚಿತ್ರದ ಶೂಟಿಂಗ್ ನಡೆದಿತ್ತು. ದ್ವಿಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದರು. ‘ಲಿಂಗ’ ಚಿತ್ರದ ಸೋಲಿಗೆ ರಜನಿಕಾಂತ್ ಅವರೇ ಕಾರಣ ಎಂದು ನಿರ್ದೇಶಕ ಕೆ.ಎಸ್. ರವಿಕುಮಾರ್ ಅವರು ಆರೋಪ ಮಾಡಿದ್ದಾರೆ.
2014ರಲ್ಲಿ ‘ಲಿಂಗ’ ಸಿನಿಮಾ ತೆರೆ ಕಂಡಿತ್ತು. ಆ ಕಾಲಕ್ಕೆ ವಿಶ್ವಾದ್ಯಂತ 158 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಇದು ದೊಡ್ಡ ನಂಬರ್ ಆಗಿದ್ದರೂ ಕೂಡ ಸಿನಿಮಾದ ಬಜೆಟ್ ಅದಕ್ಕೂ ಮೀರಿದ್ದರಿಂದ ಸಿನಿಮಾಗೆ ಸೋಲು ಉಂಟಾಯಿತು. ಹಾಗಾದರೆ ಸಿನಿಮಾ ಸೋಲಿಗೆ ಕಾರಣ ಏನು? ಈ ಬಗ್ಗೆ ನಿರ್ದೇಶಕ ಕೆ.ಎಸ್. ರವಿಕುಮಾರ್ ಅವರು ಮಾತನಾಡಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರವಿಕುಮಾರ್ ಅವರು ಈ ವಿಚಾರ ತಿಳಿಸಿದ್ದಾರೆ. ‘ಸಿನಿಮಾ ಎಡಿಟಿಂಗ್ ಆಗುವಾಗ ರಜನಿಕಾಂತ್ ಅವರು ಮೂಗು ತೂರಿಸಿದರು. ಗ್ರಾಫಿಕ್ಸ್ ಕೆಲಸ ಮಾಡಿಸಲು ನನಗೆ ಹೆಚ್ಚು ಸಮಯ ನೀಡಲಿಲ್ಲ. ಸಿನಿಮಾದ ದ್ವಿತೀಯಾರ್ಧವನ್ನು ಸಂಪೂರ್ಣ ಬದಲಾಯಿಸಿದರು. ಅನುಷ್ಕಾ ಶೆಟ್ಟಿಯ ಹಾಡನ್ನು ತೆಗೆದು ಹಾಕಿದರು. ಕ್ಲೈಮ್ಯಾಕ್ಸ್ನಲ್ಲಿ ಇದ್ದ ಸರ್ಪ್ರೈಸ್ ಟ್ವಿಸ್ಟ್ ಕೂಡ ತೆಗೆದರು. ಕೃತಕ ಬಲೂನ್ ಜಂಪಿಂಗ್ ದೃಶ್ಯವನ್ನು ಸೇರಿಸಿ ಇಡೀ ಸಿನಿಮಾವನ್ನು ಹಾಳು ಮಾಡಿದರು’ ಎಂದು ರವಿಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಿಂದ ಮನೆಗೆ ಮರಳಿದ ರಜನಿಕಾಂತ್; ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ ಸೂಪರ್ ಸ್ಟಾರ್
‘ಲಿಂಗ’ ಸಿನಿಮಾ ಬಿಡುಗಡೆಯಾಗಿ 10 ವರ್ಷ ಕಳೆದಿದೆ. ಈಗಲೂ ರಜನಿಕಾಂತ್ ಅವರ ಬೇಡಿಕೆ ಕಡಿಮೆ ಆಗಿಲ್ಲ. ‘ಜೈಲರ್’ ಸಿನಿಮಾದ ಯಶಸ್ಸಿನ ನಂತರವಂತೂ ಅವರ ಚಾರ್ಮ್ ಇನ್ನಷ್ಟು ಹೆಚ್ಚಿತು. ಈಗ ರಜನಿಕಾಂತ್ ಅವರು ‘ವೆಟ್ಟಯ್ಯನ್’ ಮತ್ತು ‘ಕೂಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಕ್ಟೋಬರ್ 10ರಂದು ‘ವೆಟ್ಟಯ್ಯನ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಟಿ.ಜೆ. ಜ್ಞಾನವೇಲ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್, ಮಂಜು ವಾರಿಯರ್, ರಾಣಾ ದಗ್ಗುಬಾಟಿ ಮುಂತಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.