
ಮಹೇಶ್ ಬಾಬು (Mahesh Babu) ಪ್ರಸ್ತುತ ರಾಜಮೌಳಿ ನಿರ್ದೇಶನದ ಪ್ಯಾನ್ ವರ್ಲ್ಡ್ ಸಿನಿಮಾ ‘ವಾರಣಾಸಿ’ಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕಾಗಿ ಅವರು ಬರೋಬ್ಬರಿ ಮೂರು ವರ್ಷ ಮೀಸಲಿಟ್ಟಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ‘ವಾರಣಾಸಿ’ ಸಿನಿಮಾದ ಬಳಿಕ ಮಹೇಶ್ ಬಾಬು ಪ್ಯಾನ್ ವರ್ಲ್ಟ್ ನಟ ಆಗಲಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ ‘ವಾರಣಾಸಿ’ ಸಿನಿಮಾ ಅನ್ನು ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ರಿಲೀಸ್ ಮಾಡುವ ಆಲೋಚನೆಯಲ್ಲಿದ್ದಾರೆ ರಾಜಮೌಳಿ. ಇದರ ನಡುವೆ ‘ವಾರಣಾಸಿ’ ಬಳಿಕ ಮಹೇಶ್ ಬಾಬು ತೆಲುಗಿನ ನಿರ್ದೇಶಕರೊಬ್ಬರ ಜೊತೆಗೆ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಪಕ್ಕಾ ಕಮರ್ಶಿಯಲ್, ಮಾಸ್, ಮಸಾಲ ಸಿನಿಮಾಗಳನ್ನು ನಿರ್ದೇಶನ ಮಾಡುವ ‘ಗಿಮಿಕ್ ನಿರ್ದೇಶಕ’ ಎಂದೇ ಕರೆಸಿಕೊಳ್ಳುವ ಅನಿಲ್ ರವಿಪುಡಿ ಅವರ ಮುಂದಿನ ಸಿನಿಮಾನಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಕೆಲ ದಿನಗಳಿಂದಲೂ ಈ ಸುದ್ದಿ ಹರಿದಾಡುತ್ತಿದ್ದು, ಮಹೇಶ್ ಬಾಬು ಅಭಿಮಾನಿಗಳು ಸೇರಿದಂತೆ ಹಲವರು ಈ ಸುದ್ದಿಗೆ ಹುಬ್ಬೇರಿಸಿದ್ದರು. ರಾಜಮೌಳಿ ಅಂಥಹಾ ನಿರ್ದೇಶಕನ ಸಿನಿಮಾನಲ್ಲಿ ಕೆಲಸ ಮಾಡಿದ ಬಳಿಕ ಸಾಧಾರಣ (ಆದರೆ ಯಶಸ್ವಿ) ನಿರ್ದೇಶಕ ಎನಿಸಿಕೊಂಡಿರುವ ಅನಿಲ್ ರವಿಪುಡಿ ಜೊತೆಗೆ ಕೆಲಸ ಮಾಡುತ್ತಿದ್ದಾರೆಯೇ ಮಹೇಶ್ ಬಾಬು ಎಂದು ಹಲವರು ಹುಬ್ಬೇರಿಸಿದ್ದರು.
ಇದೀಗ ಈ ಸುದ್ದಿಗೆ ಖುದ್ದು ನಿರ್ದೇಶಕ ಅನಿಲ್ ರಾವಿಪುಡಿ ಸ್ಪಷ್ಟನೆ ನೀಡಿದ್ದು, ಮಹೇಶ್ ಬಾಬು ತಮ್ಮ ಸಿನಿಮಾನಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ. ಟ್ವೀಟ್ ಮಾಡಿರುವ ನಿರ್ದೇಶಕ ಅನಿಲ್ ರವಿಪುಡಿ, ‘ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ನನ್ನ ಆತ್ಮೀಯರು, ನನ್ನ ಹಿತೈಷಿಗಳು. ಅವರ ಬಗ್ಗೆ ನನಗೆ ಅಪಾರ ಗೌರವ, ಪ್ರೀತಿ ಇದೆ. ಪ್ರಸ್ತುತ ಅವರ ಹಾಗೂ ನನ್ನ ಕೊಲ್ಯಾಬರೇಷನ್ನಲ್ಲಿ ಸಿನಿಮಾ ಬರಲಿದೆ ಎಂದು ಹರಿದಾಡುತ್ತಿರುವ ಸುದ್ದಿ ನಿಜವಲ್ಲ, ಅಂಥಹಾ ಸುದ್ದಿಗಳನ್ನು ಹರಿಯ ಬಿಡುವುದು ಸೂಕ್ತವಲ್ಲ’ ಎಂದಿದ್ದಾರೆ.
ಇದನ್ನೂ ಓದಿ:ಮಹೇಶ್ ಬಾಬುಗೆ ಸಂದೀಪ್ ರೆಡ್ಡಿ ವಂಗಾ ವಿಶೇಷ ಶುಭಾಶಯ: ‘ಡೆವಿಲ್’ ಮತ್ತೆ ಮುನ್ನೆಲೆಗೆ?
ಮಹೇಶ್ ಬಾಬು ಈ ಹಿಂದೆ ಅನಿಲ್ ನಿರ್ದೇಶನದ ಸಿನಿಮಾನಲ್ಲಿ ನಟಿಸಿದ್ದರು. 2020ರಲ್ಲಿ ಬಿಡುಗಡೆ ಆದ ‘ಸರಿಲೇರು ನೀಕೆವ್ವರು’ ಸಿನಿಮಾನಲ್ಲಿ ಈ ಇಬ್ಬರು ಒಟ್ಟಿಗೆ ನಟಿಸಿದ್ದರು. ಅನಿಲ್ ರವಿಪುಡಿ, ಒಳ್ಳೆಯ ಕಮರ್ಶಿಯಲ್ ಸಿನಿಮಾ ನಿರ್ದೇಶಕ. ಸೂಪರ್ ಹಿಟ್ ಸಿನಿಮಾಗಳಾದ ‘ಎಫ್ 2’, ‘ಎಫ್3’, ‘ಭಗಂತ ಕೇಸರಿ’, ‘ಸಂಕ್ರಾಂತಿಕಿ ವಸ್ತುನ್ನಾಮ್’, ಇತ್ತೀಚೆಗೆ ‘ಮನ ಶಂಕರ ವರಪ್ರಸಾದ್ ಗಾರು’ ಇದೀಗ ‘ಜನವರಿ 12 ವಿಡುದಲ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಇನ್ನು ಮಹೇಶ್ ಬಾಬು ಪ್ರಸ್ತುತ ರಾಜಮೌಳಿ ಜೊತೆಗೆ ‘ವಾರಣಾಸಿ’ ಸಿನಿಮಾನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ, ಪೃಥ್ವಿರಾಜ್ ಸುಕುಮಾರನ್ ವಿಲನ್. ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಆ ಸಿನಿಮಾ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ