
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ (Nayanthara) ಅವರು ಜೂನ್ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಗೆ ಖುಷಿ ನೀಡಿತು. ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ (Vignesh Shivan) ಜೊತೆ ನಯನತಾರಾ ಮದುವೆ ನೆರವೇರಿತು. ಆದರೆ ಈ ಸೆಲೆಬ್ರಿಟಿ ವಿವಾಹದ ದೃಶ್ಯಗಳನ್ನು ನೋಡಲು ಅಭಿಮಾನಿಗಳಿಗೆ ಸಾಧ್ಯವಾಗಿಲ್ಲ. ಮದುವೆಯಲ್ಲಿ ಯಾರೂ ಫೋಟೋ ಮತ್ತು ವಿಡಿಯೋ ಚಿತ್ರಿಸದಂತೆ ಈ ಜೋಡಿ ನಿರ್ಬಂಧ ಹೇರಿತ್ತು. ಅದಕ್ಕೆ ಕಾರಣ ಕೂಡ ಇತ್ತು. ನಯನತಾರಾ-ವಿಘ್ನೇಶ್ ಶಿವನ್ ಮದುವೆಯ ಸುಂದರ ಕ್ಷಣಗಳನ್ನು ಪ್ರಸಾರ ಮಾಡುವ ಹಕ್ಕನ್ನು ನೆಟ್ಫ್ಲಿಕ್ಸ್ (Netflix) ಸಂಸ್ಥೆ ಪಡೆದುಕೊಂಡಿದೆ. ಇದು ಕೋಟ್ಯಂತರ ರೂಪಾಯಿ ಡೀಲ್. ಆದರೆ ಈ ಬಗ್ಗೆ ಕೆಲವು ದಿನಗಳಿಂದ ಒಂದಷ್ಟು ಗಾಸಿಪ್ ಹರಡಿತ್ತು. ಅವುಗಳಿಗೆಲ್ಲ ನೆಟ್ಫ್ಲಿಕ್ಸ್ ಕಡೆಯಿಂದಲೇ ಅಧಿಕೃತ ಸ್ಪಷ್ಟನೆ ನಿಡಲಾಗಿದೆ.
ನೆಟ್ಫ್ಲಿಕ್ಸ್ ಜೊತೆ ಒಪ್ಪಂದ ಆಗಿದ್ದರೂ ಕೂಡ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ತಮ್ಮ ಮದುವೆಯ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದರಿಂದ ನೆಟ್ಫ್ಲಿಕ್ಸ್ ಸಂಸ್ಥೆಯವರು ಗರಂ ಆಗಿದ್ದಾರೆ ಎನ್ನಲಾಗಿತ್ತು. ಹಾಗಾಗಿ ಅವರು ಡೀಲ್ ಕ್ಯಾನ್ಸಲ್ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವದಂತಿ ಹಬ್ಬಿಸಲಾಗಿತ್ತು. ಆದರೆ ಅದು ನಿಜವಲ್ಲ ಎಂದು ಸ್ವತಃ ನೆಟ್ಫ್ಲಿಕ್ಸ್ ಹೇಳಿದೆ.
ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯ ದೃಶ್ಯಗಳನ್ನು ಶೀಘ್ರದಲ್ಲೇ ಪ್ರಸಾರ ಮಾಡುವುದಾಗಿ ನೆಟ್ಫ್ಲಿಕ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಅದನ್ನು ಕಂಡು ಫ್ಯಾನ್ಸ್ ಖುಷಿ ಆಗಿದಾರೆ. ಈ ಹೈಪ್ರೊಫೈಲ್ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಬಂದಿದ್ದರು. ಶಾರುಖ್ ಖಾನ್, ರಜನಿಕಾಂತ್ ಸೇರಿದಂತೆ ಹಲವು ದಿಗ್ಗಜ ನಟರು ಹಾಜರಿ ಹಾಕಿದ್ದರು.
ನಯನತಾರಾ ಹಾಗೂ ವಿಘ್ನೇಶ್ ಶಿವನ್ ನಡುವಿನ ಲವ್ ಸ್ಟೋರಿ ಬಗ್ಗೆ ಹೆಚ್ಚಿನ ವಿಷಯ ತಿಳಿಯುವ ಹಂಬಲ ಕೂಡ ಅಭಿಮಾನಿಗಳಿಗೆ ಇದೆ. ಆ ಬಗ್ಗೆಯೂ ನೆಟ್ಫ್ಲಿಕ್ಸ್ನಲ್ಲಿ ಮಾಹಿತಿ ಇರಲಿದೆ ಎಂದು ಹೇಳಲಾಗುತ್ತಿದೆ. ತಮ್ಮ ಮದುವೆ ಬಗ್ಗೆ ಸ್ವತಃ ನಯನತಾರಾ, ವಿಘ್ನೇಶ್ ಶಿವನ್ ಏನು ಹೇಳಿದ್ದಾರೆ? ಒಟ್ಟಾರೆ ಮದುವೆಯ ವಾತಾವರಣ ಯಾವ ರೀತಿ ಇತ್ತು? ಅತಿಥಿಗಳ ಸಂಗಮ ಹೇಗಿತ್ತು ಎಂಬುದನ್ನೆಲ್ಲ ಅಭಿಮಾನಿಗಳಿಗೆ ತೋರಿಸಲು ನೆಟ್ಫ್ಲಿಕ್ಸ್ ಸಕಲ ಸಿದ್ಧತೆ ಮಾಡಿಕೊಂಡಿದೆ.
Published On - 4:22 pm, Thu, 21 July 22