‘ಪುಷ್ಪ 2’ ಬಿಡುಗಡೆಗೆ ಮುನ್ನವೇ ‘ಪುಷ್ಪ 3’ ಸುದ್ದಿ, ನಿರ್ಮಾಪಕ ಕೊಟ್ಟ ಸುಳಿವು

|

Updated on: Oct 25, 2024 | 12:37 PM

Pushpa 3: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಇದೀಗ ಸಿನಿಮಾದ ಮೂರನೇ ಭಾಗದ ಚರ್ಚೆ ಪ್ರಾರಂಭ ಆಗಿದೆ. ‘ಪುಷ್ಪ’ ಸಿನಿಮಾ ನಿರ್ಮಾಪಕರು ಈ ಬಗ್ಗೆ ಮಾತನಾಡಿದ್ದಾರೆ.

‘ಪುಷ್ಪ 2’ ಬಿಡುಗಡೆಗೆ ಮುನ್ನವೇ ‘ಪುಷ್ಪ 3’ ಸುದ್ದಿ, ನಿರ್ಮಾಪಕ ಕೊಟ್ಟ ಸುಳಿವು
Follow us on

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಅಪ್ಪಳಿಸಲಿದೆ. ‘ಪುಷ್ಪ 2’ ಪ್ರಸ್ತುತ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾ ಡಿಸೆಂಬರ್ 5ಕ್ಕೆ ತೆರೆಗೆ ಬರಲಿದ್ದು, ಸಿನಿಮಾ ಬಿಡುಗಡೆಗೆ ಮುಂಚೆಯೇ ಸಾವಿರಾರು ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದ್ದು, ನಿರ್ಮಾಪಕರು ಈಗಾಗಲೇ ಭಾರಿ ಲಾಭದಲ್ಲಿದ್ದಾರೆ. ಸಿನಿಮಾದ ಬಿಡುಗಡೆಗೆ ತಯಾರಿ ನಡೆಯುತ್ತಿರುವಾಗಲೇ ‘ಪುಷ್ಪ 3’ ಸಿನಿಮಾದ ಸುದ್ದಿ ಹಬ್ಬಿದೆ. ಇದಕ್ಕೆ ಕಾರಣ ಸಿನಿಮಾದ ನಿರ್ಮಾಪಕ ನೀಡಿರುವ ಹೇಳಿಕೆ.

ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ಮಾತುಕತೆ ನಡೆಸಿರುವ ‘ಪುಷ್ಪ 2’ ನಿರ್ಮಾಪಕರು ಸಿನಿಮಾದ ಮೂರನೇ ಭಾಗದ ಬಗ್ಗೆ ಕೇಳಲಾದ ಪ್ರಶ್ನೆ ಬಗ್ಗೆ ಉತ್ತರ ನೀಡಿದ್ದಾರೆ. ‘ನಮಗೆ ‘ಪುಷ್ಪ 2’ ಸಿನಿಮಾ ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಅದರ ಬೆನ್ನಲ್ಲೆ ‘ಪುಷ್ಪ 3’ ಬಗ್ಗೆಯೂ ವಿಶ್ವಾಸವಿದೆ’ ಎಂದು ಹೇಳಿದ್ದಾರೆ. ಆ ಮೂಲಕ ‘ಪುಷ್ಪ 3’ ಸಿನಿಮಾ ಬರುವುದನ್ನು ಖಾತ್ರಿ ಪಡಿಸಿದ್ದಾರೆ.

‘ಪುಷ್ಪ’ ಸಿನಿಮಾದ ಮೊದಲ ಭಾಗದಲ್ಲಿ ಪುಷ್ಪ, ರಕ್ತ ಚಂದನ ಕಡಿಯುವ ಕೂಲಿ ಆಳಾಗಿ ಆ ನಂತರ ರಕ್ತ ಚಂದನ ಸಾಗಾಟ ಮಾಡುವವರ ಪಾರ್ಟನ್ ಆಗಿ ಆ ಬಳಿಕ ಸಿಂಡಿಕೇಟ್ ಮೆಂಬರ್ ಆದ ಆ ಬಳಿಕ ಸಿನಿಮಾದ ಕೊನೆಯಲ್ಲಿ ಸಿಂಡಿಕೇಟ್ ಮುಖಂಡ ಸಹ ಆದ. ಆದರೆ ಕೊನೆಯಲ್ಲಿ ಪುಷ್ಪನಿಗೆ ಪೊಲೀಸ್ ಅಧಿಕಾರಿ ಬನ್ವರ್ ಸಿಂಗ್ ಜೊತೆ ಭಿನ್ನಾಭಿಪ್ರಾಯ ಏರ್ಪಟ್ಟು, ಇಬ್ಬರೂ ಪರಸ್ಪರ ವಿರೋಧಿಗಳಾದರು.

ಇದನ್ನೂ ಓದಿ:ಒಂದು ದಿನ ಹಿಂದಕ್ಕೆ ಬಂದ ‘ಪುಷ್ಪ 2’ ರಿಲೀಸ್ ದಿನಾಂಕ

‘ಪುಷ್ಪ 2’ ಸಿನಿಮಾದ ಪ್ರೋಮೋನಲ್ಲಿ ತೋರಿಸಿರುವಂತೆ ಪುಷ್ಪ ಈಗ ಇನ್ನೂ ದೊಡ್ಡ ವ್ಯಕ್ತಿಯಾಗಿ ಬೆಳೆದಿದ್ದು, ಆತನಿಗೆ ಭಾರಿ ಜನ ಬೆಂಬಲ ವ್ಯಕ್ತವಾಗಿದೆ. ಆದರೆ ಪುಷ್ಪನಿಗೆ ವೈರಿಗಳ ಸಂಖ್ಯೆ ಸಹ ಹೆಚ್ಚಾಗಿದ್ದು, ಜೈಲಿನಲ್ಲಿ ಪುಷ್ಪನನ್ನು ಜೈಲಿಗೆ ಹಾಕಲಾಗಿದೆ. ಜೈಲಿನಲ್ಲಿ ಪುಷ್ಪನನ್ನು ಕೊಲ್ಲುವ ಪ್ರಯತ್ನ ನಡೆದಿದೆ. ಆದರೆ ಪುಷ್ಪ ತಪ್ಪಿಸಿಕೊಂಡಿದ್ದಾನೆ. ಈಗ ನಿರ್ಮಾಪಕರು ‘ಪುಷ್ಪ 3’ ಸಿನಿಮಾ ಸಹ ಬರಲಿದೆ ಎಂದು ಹೇಳಿದ್ದು, ಪುಷ್ಪ ಜೈಲಿನಿಂದ ತಪ್ಪಿಸಿಕೊಳ್ಳುವುದೇ ‘ಪುಷ್ಪ 2’ ಸಿನಿಮಾದ ಕತೆಯ ಅಂತ್ಯ ಆಗಿರಬಹುದು. ‘ಪುಷ್ಪ 3’ನಲ್ಲಿ ಅಲ್ಲು ಅರ್ಜುನ್ ಕಾಡಿನಿಂದ ಮತ್ತೆ ಬಂದು ವಿರೋಧಿಗಳನ್ನು ಕೊಲ್ಲುವ ಕತೆಯನ್ನು ಒಳಗೊಂಡಿರಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

‘ಪುಷ್ಪ 2’ ಸಿನಿಮಾ ಡಿಸೆಂಬರ್ 5 ರಂದು ಬಿಡುಗಡೆ ಆಗಲಿದೆ. ಈ ಮೊದಲು ‘ಪುಷ್ಪ 2’ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ತಡವಾದ ಕಾರಣ ಸಿನಿಮಾದ ಬಿಡುಗಡೆ ಮುಂದೂಡಲಾಯ್ತು. ಮೊದಲಿಗೆ ಡಿಸೆಂಬರ್ 06 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಈಗ ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 05ಕ್ಕೆ ತೆರೆಗೆ ಬರಲಿದೆ. ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಸುನಿಲ್, ಜಗಪತಿ ಬಾಬು ಇನ್ನೂ ಕೆಲವರು ಇರಲಿದ್ದಾರೆ. ಕೆಲ ಮೂಲಗಳ ಪ್ರಕಾರ, ‘ಪುಷ್ಪ 2’ನಲ್ಲಿ ಶ್ರದ್ಧಾ ಕಪೂರ್ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ