
ನಟ ಅಭಿಷೇಕ್ ಅಂಬರೀಷ್ (Abhishek Ambareesh) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇಂದು (ಅ.3) ಅವರಿಗೆ ಹುಟ್ಟುಹಬ್ಬದ (Abhishek Ambareesh Birthday) ಸಂಭ್ರಮ. ಆ ಪ್ರಯುಕ್ತ ಹೊಸ ಟೀಸರ್ ಹಾಗೂ ಪೋಸ್ಟರ್ಗಳನ್ನು ರಿಲೀಸ್ ಮಾಡಲಾಗುತ್ತಿದೆ. ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ‘ರೆಬಲ್ ಸ್ಟಾರ್’ ಅಂಬರೀಷ್ ಪುತ್ರ ಎಂಬ ಕಾರಣಕ್ಕೆ ಅಭಿಷೇಕ್ ಮೇಲೆ ಸಿನಿಪ್ರಿಯರಿಗೆ ವಿಶೇಷ ಅಭಿಮಾನ. ಅಂಬಿ ಪುತ್ರನಿಗೆ ಇಂದು ಸೆಲೆಬ್ರಿಟಿಗಳು, ಸ್ನೇಹಿತರು, ಆಪ್ತರು ಹಾಗೂ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಈ ಖುಷಿಯನ್ನು ಹೆಚ್ಚಿಸಲು ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ.
ಅಭಿಷೇಕ್ ಅಂಬರೀಷ್ ನಟಿಸುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿಯಾಗಲು ಅನೇಕ ಕಾರಣಗಳಿವೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ‘ದುನಿಯಾ’ ಸೂರಿ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಕೂಡ ಗಮನ ಸೆಳೆಯುತ್ತಿದೆ. ರಗಡ್ ಸಿನಿಮಾಗಳನ್ನು ಮಾಡುವಲ್ಲಿ ಸೂರಿ ಫೇಮಸ್. ಅಭಿಷೇಕ್ ಅವರನ್ನು ಆ ರೀತಿ ನೋಡಲು ಫ್ಯಾನ್ಸ್ ಬಯಸುತ್ತಾರೆ. ಈಗ ಟೀಸರ್ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಲಾಗಿದೆ.
‘ಅಮರ್’ ಚಿತ್ರದ ಮೂಲಕ ಅಭಿಷೇಕ್ ಅಂಬರೀಷ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲಿ ಅವರಿಗೆ ನಾಗಶೇಖರ್ ನಿರ್ದೇಶನ ಮಾಡಿದ್ದರು. ಆ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು. ಈಗ ‘ಬ್ಯಾಡ್ ಮ್ಯಾನರ್ಸ್’ ಮಾತ್ರವಲ್ಲದೇ ಮಹೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರವನ್ನು ಕೂಡ ಅಭಿಷೇಕ್ ಒಪ್ಪಿಕೊಂಡಿದ್ದಾರೆ. ಕೃಷ್ಣ ನಿರ್ದೇಶನ ಮಾಡಲಿರುವ ‘ಕಾಳಿ’ ಚಿತ್ರಕ್ಕೂ ಅಭಿಷೇಕ್ ಹೀರೋ ಆಗಿದ್ದಾರೆ.
‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ ಅವರು ಭರ್ಜರಿ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂಬುದಕ್ಕೆ ಟೀಸರ್ನಲ್ಲಿ ಸಾಕ್ಷಿ ಸಿಕ್ಕಿದೆ. ಇನ್ನು, ಖಡಕ್ ಡೈಲಾಗ್ಗಳನ್ನೂ ಅವರು ಹೊಡೆದಿದ್ದಾರೆ. ‘ಐಡಿಯಾ ಸೃಷ್ಟಿ ಮಾಡಿದವನು ಸತ್ರೂ ಪರವಾಗಿಲ್ಲ. ಐಡಿಯಾ ಸಾಯಲ್ಲ’, ‘ವ್ಯವಸ್ಥೆ ತಪ್ಪಲ್ಲ.. ಮನುಷ್ಯನ ಯೋಚನೆ ತಪ್ಪು’ ಎಂದು ಅವರು ಹೇಳಿರುವ ಡೈಲಾಗ್ಗಳು ಗಮನ ಸೆಳೆಯುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:56 am, Mon, 3 October 22