‘ಅನುಭವ’ ಅಂದ್ರೆ ಸಾಕು 80-90 ದಶಕದ ಪಡ್ಡೆಹುಡುಗರ ಮೈಜುಮ್ಮನ್ನುತ್ತಿತ್ತು. ಹಾಗಿತ್ತು ಆ ಅನುಭವ! ಅದು ತುಂಟ ನಟ ಕಾಶೀನಾಥ್ ಸೇರಿದಂತೆ ಅನೇಕರನ್ನು ದಿನರಾತ್ರಿಯಲ್ಲಿ ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ದ ಸಿನಿಮಾ. ಇನ್ನು ಅಭಿನಯ-ಉಮಾಶ್ರೀ ಅಂತಹ ನಟಿಯರನ್ನು ಕನ್ನಡದ ಬೆಳ್ಳಿತೆರೆಗೆ ಭರ್ಜರಿಯಾಗಿ ಪರಿಚಯಿಸಿದ ಸಿನಿಮಾ. ಅದರಲ್ಲೂ ಉಮಾಶ್ರೀ ಎಂಬ ಸಹಜ ನಟಿಗೆ ಖ್ಯಾತಿ/ಅಪಖ್ಯಾತಿಗಳನ್ನು ದಯಪಾಲಿಸಿದ ಸಿನಿಮಾ! ಒಟ್ಟಿನಲ್ಲಿ ‘ಅನುಭವ’ ಅಂದ್ರೆ ಕಾಶೀನಾಥ್ ಜೊತೆಗೆ ಅಭಿನಯ, ಉಮಾಶ್ರೀ ಅವರನ್ನು ತಳುಕುಹಾಕಿದ ಚಿತ್ರವದು. ಅದರಾಚೆಗೂ ಆ ಪಾತ್ರವರ್ಗಕ್ಕೆ ಭಿನ್ನ ಅನುಭವಗಳನ್ನೂ ದಯಪಾಲಿಸಿದ ಚಿತ್ರವದು……
ಉಮಾಶ್ರೀ ಅವರಮಟ್ಟಿಗೆ ಹೇಳುವುದಾದರೆ.. ಅವರೇ ನಿನ್ನೆ ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಹೇಳಿದಂತೆ.. ಆಗ ಡಾ.ರಾಜ್ಕುಮಾರ್ ಅವರು ತಮ್ಮ ಚಿತ್ರದ ನಾಯಕಿ ಪಾತ್ರಗಳಿಗಾಗಿ ತಲಾಶೆ ನಡೆಸುತ್ತಿದ್ದ ದಿನಗಳು. ಅದು ಪಾರ್ವತಮ್ಮ ರಾಜ್ಕುಮಾರ್ ಅವರ ಹೆಗಲ ಮೇಲೆ ಬಿದ್ದಿತ್ತು. ಆದರೂ ಅದೊಮ್ಮೆ ನಾಟಕವೊಂದರಲ್ಲಿ ಉಮಾಶ್ರೀ ಎಂಬ ಚೆಲುವೆ ಡಾ.ರಾಜ್ಕುಮಾರ್ ಅವರ ಕಣ್ಣಿಗೆ ಬಿದ್ದರು.
ತಡಮಾಡದೆ ಡಾ.ರಾಜ್ಕುಮಾರ್ ಅವರು ಪಾರ್ವತಮ್ಮನವರ ಬಳಿ ಮಾತನಾಡುತ್ತಾ, ಆ ಹುಡುಗಿ ನಟನೆ ಚೆನ್ನಾಗಿತ್ತು. ನಮ್ಮ ಮುಂದಿನ ಚಿತ್ರಕ್ಕೆ ನಾಯಕಿಯನ್ನಾಗಿ ಹಾಕಿಕೊಳ್ಳಬಹುದಾ ನೋಡು ಎಂಬ ಕೋರಿಕೆಯನ್ನು ಮುಂದಿಟ್ಟರಂತೆ. ಅದಕ್ಕೇನಂತೆ ಮಾತನಾಡಿಸೋಣ ಬಿಡಿ ಎಂದು ಪಾರ್ವತಮ್ಮನವರು ಸುಮ್ಮನಾದರಂತೆ. ಆದರೆ ಉಮಾಶ್ರೀ ನಸೀಬು ಹ್ಯಾಗಿತ್ತು ಅಂದ್ರೆ.. ದೊಡ್ಮನೆ ದಂಪತಿ ಹಾಗೆ ಮಾತನಾಡಿದ ಕೆಲವೇ ದಿನಗಳಲ್ಲಿ ಉಮಾಶ್ರೀ ಅವರ ‘ಅನುಭವ’ ಬಿಡುಗಡೆಯಾಗಿಬಿಟ್ಟಿದೆ. ಅದರ ಖ್ಯಾತಿ ದೊಡ್ಮನೆ ವರೆಗೂ ತಲುಪಿದೆ…..
ಡಾ. ರಾಜ್ಗೆ ನಾಯಕಿಯರ ಸೆಲೆಕ್ಷನ್ನಲ್ಲಿ ಅಪಾರ ಕಾಳಜಿ ವಹಿಸುತ್ತಿದ್ದ ಪಾರ್ವತಮ್ಮನವರು ‘ಅನುಭವ’ದ ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ. ಅದನ್ನು ಡಾ. ರಾಜ್ ಗಮನಕ್ಕೂ ತಂದಿದ್ದಾರೆ. ಹೀಗ್ಹೀಗೆ ನೀವು ಅಂದುಕೊಂಡಿದ್ದ ಹುಡುಗಿ ಇಂತಹ ಚಿತ್ರದಲ್ಲಿ ನಟಿಸಿದ್ದು, ಇಡೀ ರಾಜ್ಯದ ಜನತೆ ಅದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಪಿಕ್ಚರ್ ಅದೆಂಥದ್ದೋ ಅನುಭವದ ಬಗ್ಗೆ ಇದೆಯಂತೆ ಎಂದು ಪಾರ್ವತಮ್ಮನವರು, ಡಾ. ರಾಜ್ಗೆ ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡ ಅಣ್ಣಾ ಒಂದೇ ಏಟಿಗೆ ಅಯ್ಯಯ್ಯೋ ಅಂಥದ್ದೆಲ್ಲ ನಮಗೆ ಬೇಡವೇ ಬೇಡ. ಆ ಹುಡುಗಿ ನಮ್ಮ ಚಿತ್ರಕ್ಕೆ ಆಯ್ಕೆಯಾಗುವುದು ಬೇಡ ಅಂದುಬಿಟ್ಟಿದ್ದಾರೆ. ಅದರೊಂದಿಗೆ ಉಮಾಶ್ರೀ ಎಂಬ ನಟಿ ಕಾಯಂ ಆಗಿ ಡಾ. ರಾಜ್ ಕ್ಯಾಂಪ್ನಿಂದ ಎಂಟ್ರಿಗೆ ಮುಂಚೆಯೇ ನಿರ್ಗಮಿಸಿದ್ದಾರೆ!
ಇದನ್ನು ಸ್ವತಃ ಉಮಾಶ್ರೀ ಅವರೇ ನಿನ್ನೆ ನಗೆಯಾಡುತ್ತಾ ನನ್ನ ಅನುಭವದ ಖ್ಯಾತಿ ಹಾಗಿತ್ತು. ಇಂತಹ ಫಜೀತಿಯನ್ನೂ ತಂದಿಟ್ಟಿತು. ಏನ್ಮಾಡೋದು.. ಅಣ್ಣಾವ್ರ ನಾಯಕಿಯಾಗಿ ಅಭಿನಯಿಸುವ ಭಾಗ್ಯ ನನಗೆ ಬರಲಿಲ್ಲ ಎಂದು ಪೆಚ್ಚುಮೋರೆ ಹಾಕಿಕೊಂಡರು ಉಮಾಶ್ರೀ.
ಆದರೆ ಅಣ್ಣಾವ್ರ ಬಗ್ಗೆ ಉಮಾಶ್ರೀ ಅವರು ಇಂದಿಗೂ ಹೊಂದಿರುವ ಗೌರವ ಭಾವ ನಿನ್ನೆಯೂ ಪ್ರಕಟವಾಯಿತು. ಕುಳಿತಲ್ಲಿಂದಲೇ ಅನೇಕ ಅತಿರಥ ಮಹಾರಥರ ಫೋಟೋಗಳು ನಿನ್ನೆ ಕಾರ್ಯಕ್ರಮದ ಪರದೆಯ ಮೇಲೆ ಮೂಡುತ್ತಿದ್ದರೆ.. ಉಮಾಶ್ರೀ ಎಲ್ಲರ ಬಗ್ಗೆಯೂ ತಮ್ಮ ಅನುಭವವನ್ನು ಹೇಳಿಕೊಳ್ಳುತ್ತಿದ್ದರು. ಆದರೆ ಡಾ. ರಾಜ್ ಫೋಟೋ ಬಂದಾಗ ಅಯಾಚಿತವಾಗಿ ಉಮಾಶ್ರೀ ಅವರು ತಮ್ಮೆರಡೂ ಕೈಗಳನ್ನು ಮೇಲೆತ್ತಿ ಡಾ. ರಾಜ್ಗೆ ಕಣ್ಮುಚ್ಚಿ ನಮಿಸಿದರು.
Published On - 4:35 pm, Mon, 22 March 21