ಜೈಪುರ: ಬಾಲಿವುಡ್ನ ಖ್ಯಾತ ನಟ ಇರ್ಫಾನ್ ಖಾನ್ ಅವರ ತಾಯಿ ಸಾಯಿದಾ ಅವರು ಜೈಪುರದಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಆದ್ರೆ ಲಾಕ್ಡೌನ್ ಪರಿಣಾಮ ರಾಜಸ್ಥಾನಕ್ಕೆ ತೆರಳಲು ಸಾಧ್ಯವಾಗದ ಕಾರಣ ತನ್ನ ತಾಯಿಯ ಅಂತಿಮ ದರ್ಶನವನ್ನು ಇರ್ಫಾನ್ ಖಾನ್ ಪಡೆಯಲು ಸಾಧ್ಯವಾಗಿಲ್ಲ.
ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಮೇ 3ರವರೆಗೆ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಲು ಯಾವುದೇ ವಿಮಾನ ಸೇವೆ ಇಲ್ಲ. ಹಾಗಾಗಿ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲೂ ನಟ ಇರ್ಫಾನ್ ಭಾಗಿಯಾಗಲು ಸಾಧ್ಯವಾಗಿಲ್ಲ. ವಿಡಿಯೋ ಕಾನ್ಫರೆನ್ಸ್ ಮುಖಾಂತರ ಜೈಪುರದಲ್ಲಿ ಶನಿವಾರ ಸಂಜೆ ನಡೆದ ತನ್ನ ತಾಯಿಯ ಅಂತ್ಯಕ್ರಿಯನ್ನು ವೀಕ್ಷಿಸಿದ್ದಾರೆ.
ಇರ್ಫಾನ್ ಖಾನ್ ಅವರ ತಾಯಿ 95 ವರ್ಷದ ಸಾಯಿದಾ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಕುಟುಂಬದ ಕೆಲವೇ ಸದಸ್ಯರು ಮಾತ್ರ ಇರ್ಫಾನ್ ಖಾನ್ ಅವರ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಟೋಂಕ್ನ ನವಾಬ್ ಕುಟುಂಬಕ್ಕೆ ಸೇರಿದ ಸಾಯಿದಾ, ಜೈಪುರದ ಬೆನಿವಾಲ್ ಕಾಂತಾ ಕೃಷ್ಣ ಕಾಲೋನಿಯಲ್ಲಿ ವಾಸವಿದ್ದರು.