ಬೆಂಗಳೂರು: ಖ್ಯಾತ ಸ್ಯಾಂಡಲ್ ವುಡ್ ನಿರ್ದೇಶಕ ಪ್ರಶಾಂತ್ ರಾಜ್ ವಿರುದ್ಧದ ವಂಚನೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಂಚನೆ ಆರೋಪದ ಬಗ್ಗೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಪ್ರಶಾಂತ್ ರಾಜ್, ದೂರು ನೀಡಿರುವ ಗಿರಿಜಮ್ಮ ತನ್ನ ಅತ್ತೆ ಎಂದು ಹೇಳಿದ್ದಾರೆ.
ಗಿರಿಜಮ್ಮ ಮಗ ಅಭಿಲಾಷ್ ಸಿಬಿಐ ಅಧಿಕಾರಿ ಎಂದು ಶ್ರೀಮಂತರಿಗೆ ವಂಚಿಸುತ್ತಿದ್ದ. ಇತ್ತೀಚೆಗಷ್ಟೇ ಅಭಿಲಾಷ್ ಹಾಗೂ ಮತ್ತೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ ಬೆನ್ಜ್ ಕಾರು ಸಹ ಜಪ್ತಿ ಮಾಡಿದ್ದರು. ಆಗ ಮನೆಗೆ ಕರೆದು ಗಿರಿಜಮ್ಮನವರೇ ಒಂದಷ್ಟು ಹಣ ಮತ್ತು ಒಡವೆ ಕೊಟ್ಟಿದ್ದಾರೆ. ಅದನ್ನ ನಾನು ವಾಪಸ್ ಸಹ ಕೊಟ್ಟಿದ್ದೇನೆ. ಅದಕ್ಕೆ ಬೇಕಾದ ದಾಖಲೆ ಸಹ ಇದೆ ಎಂದಿದ್ದಾರೆ.
ಅಲ್ಲದೆ, ಅಭಿಲಾಷ್ ವಿರುದ್ಧ ಕಿಡ್ನಾಪ್, ಕೊಲೆಗೆ ಯತ್ನ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ. ಆದ್ರೆ ಈಗ ನನ್ನ ವಿರುದ್ಧ ಯಾಕೆ ಸುಳ್ಳು ದೂರು ದಾಖಲಿಸಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ಖಾಸಗಿ ವಿಚಾರದ ಪ್ರಯುಕ್ತ ಬೇರೆ ಕಡೆ ಇದ್ದೇನೆ, ಬಂದ ಕೂಡಲೇ ಈ ಬಗ್ಗೆ ಮಾತನಾಡುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಒಂದು ವೇಳೆ ತಪ್ಪು ಮಾಡಿದ್ದರೆ ಕಾನೂನಾತ್ಮಕವಾಗಿ ನನಗೆ ಶಿಕ್ಷೆಯಾಗಲಿ ಎಂದು ನಿರ್ದೇಶಕ ಪ್ರಶಾಂತ್ ರಾಜ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.