ಬೆಂಗಳೂರು: ನಟ ಚಿರಂಜೀವಿ ಸರ್ಜಾಗೆ 36ನೇ ಹುಟ್ಟುಹಬ್ಬ ಇಂದು. ಚಿರು ನಿಧನರಾದ ನಂತರದ ಮೊದಲ ಹುಟ್ಟುಹಬ್ಬವೂ ಇದಾಗಿದೆ. ಸಂಭ್ರಮ ನೆಲೆಸಬೇಕಿದ್ದ ಜಾಗದಲ್ಲಿ ದುಃಖ ಮಡುವುಗಟ್ಟಿದೆ. ಆದರೂ ತಕ್ಕಮಟ್ಟಿಗೆ ನೆಲಗುಳಿ ಗ್ರಾಮದ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಸಮಾಧಿಗೆ ಪೂಜೆ ನೆರವೇರಿಸುವ ಮೂಲಕ ಕುಟುಂಬಸ್ಥರು ತಮ್ಮ ದುಃಖವನ್ನು ಕಡಿಮೆ ಮಾಡಿಕೊಂಡಿದ್ದಾರೆ.
ಚಿರು ಹುಟ್ಟುಹಬ್ಬ ಅಂಗವಾಗಿ ಪುಟ್ಟ ಅಭಿಮಾನಿಗಳು ಬರ್ತ್ ಡೇ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ನೆಲಗುಳಿ ಗ್ರಾಮದಲ್ಲಿರೋ ಚಿರು ಸಮಾಧಿಯತ್ತ ಆಗಮಿಸಿದ ಅಭಿಮಾನಿಗಳು ತುಸು ನಿರಾಶೆಗೊಂಡಿದ್ದಾರೆ. ಯಾರನ್ನೂ ಒಳಗೆ ಬಿಡದ ಕಾರಣ ಗೇಟಲ್ಲಿಯೇ ನಿಂತು ಅಭಿಮಾನಿಗಳು ಕೇಕ್ ಕತ್ತರಿಸುವ ಮೂಲಕ ತಮ್ಮ ನಾಯಕನಿಗೆ ಅಭಿಮಾನ ಸಲ್ಲಿಸಿದ್ದಾರೆ.
ಪತ್ನಿ ಮೇಘನಾರಿಂದ ಸಮಾಧಿ ಪೂಜೆ
ಚಿರಂಜೀವಿ ಹುಟ್ಟು ಹಬ್ಬದ ಹಿನ್ನೆಲೆ ಚಿರು ಸಮಾಧಿ ಬಳಿ ಅವರ ಪತ್ನಿ ಮೇಘನಾ ರಾಜ್ ಇನ್ನೇನು ಕೆಲವೇ ಕ್ಷಣಗಳಲ್ಲಿ ಆಗಮಿಸಲಿದ್ದಾರೆ. ಹೆಣ್ಣುಕೊಟ್ಟ ಮಾವ ಸುಂದರ್ ರಾಜ್ ಕುಟುಂಬವೂ ಸಮಾಧಿ ಬಳಿ ಬಂದು ಪೂಜೆ ಮಾಡಲಿದೆ. ಮೇಘನಾ ರಾಜ್ ಸದ್ಯ ಜೆಪಿ ನಗರ ಮನೆಯಲ್ಲೆ ಇದ್ದಾರೆ. ಸಮಾಧಿಗೆ ತೆರಳಿ ಪೂಜೆ ಸಲ್ಲಿಸುತ್ತೇವೆ ಎಂದು ಸುಂದರ್ ರಾಜ್ ಇದೇ ವೇಳೆ ತಿಳಿಸಿದ್ದಾರೆ.