ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು (ನವೆಂಬರ್ 26) ಹೈಕೋರ್ಟ್ನಲ್ಲಿ ನಡೆಯಿತು. ಬೆಳಿಗ್ಗೆ ಆರಂಭವಾದ ವಿಚಾರಣೆ ಕೆಲವು ಗಂಟೆಗಳ ಕಾಲ ಸತತವಾಗಿ ನಡೆಯಿತು. ಇಂದು (ನವೆಂಬರ್ 26) ಬಹುತೇಕ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ವಾದ ಮಂಡನೆ ಮಾಡಿದರು. ವಾದ ಮಂಡನೆಯಲ್ಲಿ ದರ್ಶನ್ ಕೊಲೆ ಮಾಡಿಲ್ಲವೆಂದು, ರೇಣುಕಾ ಸ್ವಾಮಿಯ ಅಪಹರಣವೇ ಆಗಿಲ್ಲ ಎಂದು ವಾದ ಮಂಡಿಸಿದರು. ಅಲ್ಲದೆ ದರ್ಶನ್ ಅನ್ನು ಸಿಕ್ಕಿಹಾಕಿಸುವ ಪ್ರಯತ್ನ ನಡೆದಿರುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು. ದಿನದ ಅಂತ್ಯಕ್ಕೆ ಸಮಯದ ಅಭಾವದಿಂದಾಗಿ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿಕೆ ಮಾಡಲಾಯ್ತು.
ಬೆಳಿಗ್ಗೆ ವಿಚಾರಣೆ ಆರಂಭವಾದಾಗ, ರೇಣುಕಾ ಸ್ವಾಮಿಯದ್ದು ಅಪಹರಣವೇ ಅಲ್ಲ ಎಂದು ಸಿವಿ ನಾಗೇಶ್ ವಾದ ಮಂಡಿಸಿದರು. ರೇಣುಕಾ ಸ್ವಾಮಿಯೇ ಬಾರ್ನಲ್ಲಿ ಬಿಲ್ ಕಟ್ಟಿದ್ದಾನೆ. ಅಪಹರಣಕ್ಕೆ ಒಳಗಾದ ವ್ಯಕ್ತಿ ಅಪಹರಣ ಮಾಡಿದವರಿಗೆ ಮದ್ಯ ಕೊಡಿಸುತ್ತಾನೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ದರ್ಶನ್ ಹಾಗೂ ಇತರರಿಗೆ ರೇಣುಕಾ ಸ್ವಾಮಿಯ ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ವಾದಿಸಿದರು. ಆ ಬಳಿಕ ಸಂಜೆ ನಾಲ್ಕು ಗಂಟೆಗೆ ವಿಚಾರಣೆಯನ್ನು ಮುಂದೂಡಲಾಗಿತ್ತು.
ಇದನ್ನೂ ಓದಿ:‘ರೇಣುಕಾಸ್ವಾಮಿ ಅಪಹರಣ ಆಗಿರಲಿಲ್ಲ, ಕೊಲೆ ಮಾಡುವ ಉದ್ದೇಶವೂ ಇರಲಿಲ್ಲ’; ದರ್ಶನ್ ಪರ ವಕೀಲರ ವಾದ
ಸಂಜೆ ನಾಲ್ಕು ಗಂಟೆಗೆ ಮತ್ತೆ ವಾದ ಆರಂಭಿಸಿದ ದರ್ಶನ್ ಪರ ವಕೀಲ ಸಿವಿ ನಾಗೇಶ್, ದರ್ಶನ್ರಿಂದ ವಶಪಡಿಸಿಕೊಂಡ ಶೂ, ಬಟ್ಟೆಗಳ ಮೇಲೆ ರಕ್ತದ ಕಲೆ ಇತ್ತು ಎಂದು ಹೇಳಲಾಗಿದೆ. ಆದರೆ ದರ್ಶನ್ ಬಟ್ಟೆಗಳನ್ನು ಜೂನ್ 10ರಂದೇ ಸೋಪು ಹಾಕಿ ಒಗೆಯಲಾಗಿತ್ತು, ಹೀಗೆ ಒಗೆದ ಮೇಲೆ ರಕ್ತ ಹೇಗೆ ಬರಲು ಸಾಧ್ಯ, ಶೂ ವಶಪಡಿಸಿಕೊಂಡಾಗ ಅದರ ಮೇಲೆ ರಕ್ತದ ಕಲೆ ಇದ್ದ ಬಗ್ಗೆ ಏನೂ ದಾಖಲಾಗಿಲ್ಲ, ಆದರೆ ಎಫ್ಎಸ್ಎಲ್ ವರದಿ ಬಂದ ಬಳಿಕ ರಕ್ತ ಕಲೆ ಇದೆ ಎನ್ನಲಾಗಿದೆ. ಆದರೆ ಮೃತ ರೇಣುಕಾ ಸ್ವಾಮಿಯ ದೇಹದಿಂದ ತೆಗೆದುಕೊಂಡ ಒಂದು ಬಾಟಲಿ ರಕ್ತವನ್ನು ಎಫ್ಎಸ್ಎಲ್ಗೆ ಕಳಿಸಲಾಗಿತ್ತು. ಅಲ್ಲಿ, ರಕ್ತವನ್ನು ಶೂ ಹಾಗೂ ಬಟ್ಟೆಯ ಮೇಲೆ ಹಾಕಿರುವ ಸಾಧ್ಯತೆ ಇದೆ’ ಎಂದರು ನಾಗೇಶ್, ಆ ಮೂಲಕ ಪೊಲೀಸರೇ ದರ್ಶನ್ ಅನ್ನು ಪ್ರಕರಣದಲ್ಲಿ ಸಿಕ್ಕಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದರು.
ಈ ಹಿಂದೆ ಕೆಳಹಂತದ ನ್ಯಾಯಾಲಯದಲ್ಲಿ ದರ್ಶನ್ಗೆ ಜಾಮೀನು ನಿರಾಕರಿಸಲಾಗಿತ್ತು. ಇದೀಗ ಹೈಕೋರ್ಟ್ನಲ್ಲಿ ಅರ್ಜಿ ಹಾಕಿ ವಿಚಾರಣೆ ನಡೆಸಲಾಗುತ್ತಿದೆ. ದರ್ಶನ್ಗೆ ಆರು ವಾರಗಳ ಮಧ್ಯಂತರ ಜಾಮೀನನ್ನು ಹೈಕೋರ್ಟ್ ಈಗಾಗಲೇ ನೀಡಿದ್ದು, ಅನಾರೋಗ್ಯದ ಕಾರಣ ನೀಡಿ ಈ ಆರು ವಾರಗಳ ಮಧ್ಯಂತರ ಜಾಮೀನನ್ನು ದರ್ಶನ್ ಪಡೆದುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:12 pm, Tue, 26 November 24