
‘ದಿಯಾ’ ಕೋವಿಡ್ ಸಮಯದಲ್ಲಿ ಒಟಿಟಿಯಲ್ಲಿ ಭಾರಿ ಹಿಟ್ ಆದ ಸಿನಿಮಾ. ಈಗ ಚಿತ್ರರಂಗದಲ್ಲಿ ಬೇಡಿಕೆಯ ನಟರುಗಳೆನಿಸಿಕೊಂಡಿರುವ ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ಮತ್ತು ಖುಷಿ ರವಿ ಅವರುಗಳು ಒಟ್ಟಿಗೆ ನಟನೆ ಮಾಡಿದ್ದ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಅನ್ನು ಕೆಎಸ್ ಅಶೋಕ ನಿರ್ದೇಶನ ಮಾಡಿದ್ದರು. ಆದರೆ ಆ ಸಿನಿಮಾದ ಬಳಿಕ ಯಾವುದೇ ಹೊಸ ಕನ್ನಡ ಸಿನಿಮಾ ಅನ್ನು ಅಶೋಕ ನಿರ್ದೇಶಿಸಿರಲಿಲ್ಲ. ಆದರೆ ಇದೀಗ ತಮ್ಮ ಅಶೋಕ್ ಕುಮಾರ್ ಮತ್ತೆ ಬಂದಿದ್ದಾರೆ. ಮತ್ತೆ ‘ದಿಯಾ’ ಜೋಡಿಯೊಟ್ಟಿಗೆ ಮರಳಿದ್ದಾರೆ.
‘6-5=2’ ಹಾಗೂ ಸೂಪರ್ ಹಿಟ್ ‘ದಿಯಾ’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕೆ ಎಸ್ ಅಶೋಕ ‘ಫ್ರೆಂಡ್ಸ್ & ಫ್ಯಾಮಿಲಿಸ್’ ಹೆಸರಿನ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಇಂದು ಅಧಿಕೃತವಾಗಿ ಲಾಂಚ್ ಆಗಿದೆ. ‘ದಿಯಾ’ ಚಿತ್ರದ ಯಶಸ್ವಿ ಜೋಡಿಯಾದ ಪೃಥ್ವಿ ಅಂಬಾರ್ ಮತ್ತು ದೀಕ್ಷಿತ್ ಶೆಟ್ಟಿ ‘ಫ್ರೆಂಡ್ಸ್ & ಫ್ಯಾಮಿಲಿಸ್’ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ. ಇವರೊಂದಿಗೆ ಹೊಸ ಪ್ರತಿಭೆ ನಿವೀನ್ (ಶ್ರೀಧರ್) ಮತ್ತು ಆಯಿಷಾ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾನಲ್ಲಿ ಖುಷಿ ರವಿ ಇರುವ ಬಗ್ಗೆ ಈಗಲೇ ಚಿತ್ರತಂಡ ಏನೂ ಹೇಳಿಲ್ಲ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಅಶೋಕ್, ‘‘ಫ್ರೆಂಡ್ಸ್ & ಫ್ಯಾಮಿಲಿಸ್’ ಮೂವರು ಗೆಳೆಯರು ಮತ್ತು ಅವರ ಕುಟುಂಬಗಳ ಸುತ್ತ ನಡೆಯುವ ಒಂದು ಹಾಸ್ಯಾತ್ಮಕ ಸೋಶಿಯಲ್ ಡ್ರಾಮಾ. ‘ದಿಯಾ’ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಇದ್ದಂತಹ ಭಾವನಾತ್ಮಕ ಪಯಣ ಈ ಚಿತ್ರದ ಮೂರು ಪ್ರಮುಖ ಪಾತ್ರಗಳಿಗೂ ಇದೆ. ಪ್ರೇಕ್ಷಕರು ಸಿನಿಮಾ ನೋಡುವಾಗ ತಮ್ಮದೇ ಜೀವನದ ಘಟನೆಗಳನ್ನು ಮೆಲಕು ಹಾಕುವಂತೆ ಚಿತ್ರೀಕರಿಸಲಾಗಿದೆ. ನನ್ನ ಹಿಂದಿನ ಸಿನಿಮಾಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಹೆಚ್ಚು ಪ್ರಬುದ್ಧವಾದ ಕಥೆ ಹಾಗೂ ಪಾತ್ರಗಳ ಆಳವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ’ ಎಂದರು.
ಇದನ್ನೂ ಓದಿ:‘ಬಾಲಿವುಡ್ ಹೀರೋಗಿಂತ ಹೆಚ್ಚಿನ ಹಣವನ್ನು ನಾವೇ ಗಳಿಸ್ತೇವೆ’; ರಣವೀರ್ ಅಲಹಾಬಾದಿಯಾ ಅಚ್ಚರಿಯ ಹೇಳಿಕೆ
ನಿರ್ದೇಶಕರೊಂದಿಗಿನ ಏಳು ವರ್ಷಗಳ ಸುದೀರ್ಘ ಒಡನಾಟವನ್ನು ಮೆಲುಕು ಹಾಕಿದ ನಟ ಪೃಥ್ವಿ ಅಂಬಾರ್, ‘2014ರಲ್ಲಿ ‘6-5=2’ ಸಿನಿಮಾ ಬಿಡುಗಡೆಯಾದಾಗ ಅದು ನೈಜ ಘಟನೆ ಎಂದು ನಂಬಲು ಸಾಧ್ಯವಾಗದೆ ನಾನು ಅಶೋಕ್ ಸರ್ ಜೊತೆ ಜಗಳವಾಡಿದ್ದೆ. ಬಳಿಕ ಮಂಗಳೂರಿನಲ್ಲಿ ಆ ಸಿನಿಮಾ ಶತದಿನೋತ್ಸವ ಆಚರಿಸಿದಾಗ ನಾನೇ ಮೂರು ಬಾರಿ ನೋಡಿದ್ದೆ. ಇಂದು ಅವರ ನಿರ್ದೇಶನದಲ್ಲಿ ನಾನು ನಾಲ್ಕನೇ ಸಿನಿಮಾ ಮಾಡುತ್ತಿರುವುದು ನನ್ನ ಅದೃಷ್ಟ. ಜೀವನದಲ್ಲಿ ಕಷ್ಟವಿರಲಿ ಅಥವಾ ಸುಖವಿರಲಿ, ಜೊತೆಗಿರುವ ಸ್ನೇಹಿತರು ಮತ್ತು ಕುಟುಂಬವೇ ನಿಜವಾದ ಆಸ್ತಿ ಎಂಬುದನ್ನು ಈ ಸಿನಿಮಾ ಸಾರುತ್ತದೆ. ಅಶೋಕ್ ಅವರ ಮೊದಲ ದಿನದ ಗೆಳೆಯರು ಹಾಗೂ ತಂತ್ರಜ್ಞರ ಬಳಗ ಇಂದಿಗೂ ಬದಲಾಗದೆ ಜೊತೆಗಿರುವುದೇ ಅವರ ವ್ಯಕ್ತಿತ್ವಕ್ಕೆ ಸಾಕ್ಷಿ’ ಎಂದರು.
ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ‘2015ರಲ್ಲಿ ಫೇಸ್‌ಬುಕ್‌ನಲ್ಲಿ ಆಡಿಶನ್ ಜಾಹೀರಾತು ನೋಡಿ ‘6-5=2’ ಪೋಸ್ಟರ್ ಕಂಡಾಗಲೇ ಇವರ ನಿರ್ದೇಶನದಲ್ಲಿ ನಟಿಸಬೇಕೆಂದು ಕನಸು ಕಂಡಿದ್ದೆ. ‘ದಿಯಾ’ ಸಿನಿಮಾ ನನ್ನ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಇಲ್ಲಿ ಕತೆಗಿಂತ ಹೆಚ್ಚಾಗಿ ಅಶೋಕ್ ಸರ್ ಮೇಲಿನ ನಂಬಿಕೆಯಿಂದ ಈ ಸಿನಿಮಾ ಒಪ್ಪಿಕೊಂಡೆ. ಕುಂದಾಪುರದ ನಾನು ಮತ್ತು ಮಂಗಳೂರಿನ ಪೃಥ್ವಿ ಈ ಚಿತ್ರಕ್ಕಾಗಿ ನಾಲ್ಕು ತಿಂಗಳು ವರ್ಕ್‌ಶಾಪ್ ಮಾಡಿ, ಸಂಪೂರ್ಣ ಮಂಡ್ಯ ಶೈಲಿಯ ಭಾಷೆಯನ್ನು ಕಲಿತು ನಟಿಸಿದ್ದೇವೆ. ಸೆಟ್‌ನಲ್ಲಿ ಸ್ಕ್ರಿಪ್ಟ್ ಪೇಪರ್ ಕೂಡ ನೋಡದಷ್ಟು ಪೂರ್ವತಯಾರಿಯೊಂದಿಗೆ ಚಿತ್ರೀಕರಣ ನಡೆಸಿದ್ದೇವೆ. ಈ ಸಿನಿಮಾದ ಮೂರು ಪಾತ್ರಗಳು ಪ್ರೇಕ್ಷಕರನ್ನೇ ಪ್ರತಿಬಿಂಬಿಸಲಿವೆ’ ಎಂದು ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡರು.
ನವೀನ್ ಎಸ್. ಪಿ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಅಶೋಕ್ ಅವರೆ ಕಥೆ, ಚಿತ್ರಕಥೆ ಬರೆದು ಸಂಕಲನ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಅವರ ಸಂಗೀತವಿದ್ದು, ಹೇಮಂತ್ ಕುಮಾರ್ ಛಾಯಾಗ್ರಹಣ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:05 pm, Sun, 15 November 26