ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಕೆ ಕಾನೂನು ತೊಡಕು ಎದುರಾಗಿದೆ. ಬೆಂಗಳೂರಿನ ಎಚ್ಎಂಟಿ ಕಾರ್ಖಾನೆ ಬಳಿ ಬೃಹತ್ ಸೆಟ್ ನಿರ್ಮಾಣ ಮಾಡಿ ತಿಂಗಳುಗಳ ಕಾಲ ಸಿನಿಮಾದ ಶೂಟಿಂಗ್ ಮಾಡಲಾಗಿತ್ತು. ಆದರೆ ಇತ್ತೀಚೆಗೆ ‘ಟಾಕ್ಸಿಕ್’ ಸಿನಿಮಾ ತಂಡ, ಸೆಟ್ ನಿರ್ಮಾಣ ಮಾಡಲು ಮರಗಳನ್ನು ಕಡಿದು ನಾಶ ಮಾಡಿದೆ ಎಂಬ ಆರೋಪ ಕೇಳಿ ಬಂದಿತ್ತು. ವಕೀಲರೊಬ್ಬರು ಮೊದಲಿಗೆ ಈ ಬಗ್ಗೆ ದೂರು ಸಲ್ಲಿಸಿದ್ದರು. ಇತ್ತೀಚೆಗೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಲ್ಲದೆ, ಎಚ್ಎಂಟಿ ಕೆಲ ನಿಯಮಗಳನ್ನು ಮುರಿದಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದೀಗ ‘ಟಾಕ್ಸಿಕ್’ ಸಿನಿಮಾ ನಿರ್ಮಾಪಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮರಗಳನ್ನು ಕಡಿದ ಆರೋಪದಲ್ಲಿ ನ್ಯಾಯಾಲಯದ ಸೂಚನೆಯಂತೆ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣ ಸಂಸ್ಥೆಗಳಾದ ಕೆವಿಎನ್ ಹಾಗೂ ಯಶ್ರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಹಾಗೂ ಹೆಚ್ಎಂಟಿ ಲಿಮಿಟೆಡ್ ವಿರುದ್ಧವೂ ಸಹ ಎಫ್ಐಆರ್ ದಾಖಲಾಗಿದೆ. ಅರಣ್ಯ ಕಾಯ್ದೆಯ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
ಇದನ್ನೂ ಓದಿ:ಕೋರ್ಟ್ ಕಟಕಟೆಯಲ್ಲಿ ರಾಧಿಕಾ ಪಂಡಿತ್; ಅಬ್ಬರಿಸುತ್ತಾ ವಾದ ಮಾಡಿದ ಯಶ್
ಕಳೆದ ಕೆಲ ತಿಂಗಳಿಂದಲೂ ‘ಟಾಕ್ಸಿಕ್’ ಸಿನಿಮಾದ ಸೆಟ್ ನಿರ್ಮಾಣವಾಗಿರುವ ಜಾಗ ಮತ್ತು ಮರ ಕಡಿದಿರುವ ಕುರಿತು ವಿವಾದಗಳು ಚಾಲ್ತಿಯಲ್ಲಿವೆ. ಅರಣ್ಯ ಸಚಿವ ಈಶ್ವರ ಖಂಡ್ರೆಯವರು, ಎಚ್ಎಂಟಿ ತನಗೆ ನೀಡಲಾಗಿದ್ದ ಜಾಗವನ್ನು ಸಿನಿಮಾಗಳಿಗೆ ಬಾಡಿಗೆ ನೀಡಿ ಹಣ ಮಾಡುತ್ತಿದೆ ಎಂದು ಆರೋಪಿಸಿತ್ತು. ‘ಟಾಕ್ಸಿಕ್’ ಸಿನಿಮಾದ ಸೆಟ್ ನಿರ್ಮಾಣ ಮಾಡಿದ ಜಾಗದಲ್ಲಿ ಮುಂಚೆ ಇದ್ದ ಮರಗಳು ಆ ನಂತರ ನಾಶವಾದ ಮರಗಳ ಮಾಹಿತಿ ಒದಗಿಸುವ ಸ್ಯಾಟಲೈಟ್ ಚಿತ್ರವನ್ನು ಸಹ ಬಿಡುಗಡೆ ಮಾಡಲಾಗಿತ್ತು.
ಬಳಿಕ ಈ ಆರೋಪಗಳಿಗೆ ಸ್ಪಂದಿಸಿದ್ದ ಎಚ್ಎಂಟಿ, ‘ಟಾಕ್ಸಿಕ್’ ಸಿನಿಮಾದ ಸೆಟ್ ನಿರ್ಮಾಣ ಆಗಿರುವ ಸ್ಥಳ ನಮ್ಮದಲ್ಲ, ಅದು ಕೆನರಾ ಬ್ಯಾಂಕ್ಗೆ ಸೇರಿದ್ದು, ಕೆನರಾ ಬ್ಯಾಂಕ್ಗೆ ಸೇರಿದ ಸ್ಥಳವನ್ನು ನಾವು ಬಾಡಿಗೆಗೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದಿತ್ತು. ಚಿತ್ರತಂಡ ಸಹ ಈ ಬಗ್ಗೆ ಪ್ರತಿಕ್ರಿಯಿಸಿ, ಮರ ಕಡಿದಿರುವ ಆರೋಪಗಳನ್ನು ತಳ್ಳಿ ಹಾಕಿತ್ತು. ಈ ಎಲ್ಲ ಘಟನೆ ತುಸು ರಾಜಕೀಯ ಕೋನವನ್ನು ಸಹ ಪಡೆದುಕೊಂಡಿವೆ. ಈಗ ಎಫ್ಐಆರ್ ಸಹ ದಾಖಲಾಗಿದ್ದು, ಚಿತ್ರದ ನಿರ್ಮಾಣ ಸಂಸ್ಥೆ ಏನು ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ