
ಕನ್ನಡದ ಸಿನಿಮಾಗಳು ದೇಶ-ಭಾಷೆಯ ಗಡಿ ಮೀರಿ ಬೆಳೆದಿವೆ. ಅದಕ್ಕೆ ‘ಕಾಂತಾರ’ (Kantara Movie) ಸಿನಿಮಾದ ಯಶಸ್ಸೇ ಸಾಕ್ಷಿ. ಈ ಚಿತ್ರದಿಂದ ನಿರ್ಮಾಣ ಆಗಿರುವ ದಾಖಲೆಗಳು ಒಂದೆರಡಲ್ಲ. ಸಾಧಾರಣ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಈಗ ಇತಿಹಾಸ. ಇದರ ನಾಗಾಲೋಟ ಇನ್ನೂ ನಿಂತಿಲ್ಲ. ಈಗ ಕೆಲವು ವಿದೇಶಿ ಭಾಷೆಗಳಲ್ಲೂ ‘ಕಾಂತಾರ’ ರಿಲೀಸ್ ಆಗಲಿದೆ. ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ ಈ ಚಿತ್ರಕ್ಕೆ ಬೇರೆ ಬೇರೆ ದೇಶಗಳ ಪ್ರೇಕ್ಷಕರಿಂದ ಬೇಡಿಕೆ ಬಂದಿದೆ. ಹಾಗಾಗಿ ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಮಾಡಿ ತೆರೆಕಾಣಿಸಲು ಸಿದ್ಧತೆ ನಡೆದಿದೆ. ಈ ಖುಷಿ ಸುದ್ದಿಯನ್ನು ‘ಹೊಂಬಾಳೆ ಫಿಲ್ಮ್ಸ್’ (Hombale Films) ಹಂಚಿಕೊಂಡಿದೆ. ಶೀಘ್ರದಲ್ಲೇ ರಿಲೀಸ್ ದಿನಾಂಕ ಪ್ರಕಟ ಆಗಲಿದೆ.
ಮೊದಲು ‘ಕಾಂತಾರ’ ಬಿಡುಗಡೆ ಆಗಿದ್ದು ಕನ್ನಡದಲ್ಲಿ ಮಾತ್ರ. ಮೊದಲ ದಿನವೇ ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತು. ಪರಭಾಷೆ ಪ್ರೇಕ್ಷಕರು ಕೂಡ ಆಸಕ್ತಿ ತೋರಿಸಿದ್ದರಿಂದ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಯಿತು. ಎಲ್ಲ ಭಾಷೆಗಳಿಂದಲೂ ಉತ್ತಮ ಕಲೆಕ್ಷನ್ ಆಯಿತು. ಒಟಿಟಿ ಪ್ರೇಕ್ಷಕರಿಗಾಗಿ ಇಂಗ್ಲಿಷ್ ವರ್ಷನ್ ಕೂಡ ರಿಲೀಸ್ ಆಯಿತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಮಾಡಲಾಗುತ್ತಿರುವುದು ವಿಶೇಷ.
ಇದನ್ನೂ ಓದಿ: Kantara: ಸ್ವಿಟ್ಜರ್ಲೆಂಡ್ನ ಜಿನೆವಾನಲ್ಲಿ ಕಾಂತಾರ ಸಿನಿಮಾ ವಿಶೇಷ ಪ್ರದರ್ಶನ
‘ಈ ವಿಷಯ ತಿಳಿಸಲು ನಮಗೆ ಖುಷಿ ಎನಿಸುತ್ತಿದೆ. ಅಂತಾರಾಷ್ಟ್ರೀಯ ಪ್ರೇಕ್ಷಕರಿಂದ ಬೇಡಿಕೆ ಬಂದಿರುವುದಕ್ಕೆ ಧನ್ಯವಾದಗಳು. ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಯಲ್ಲಿ ಕಾಂತಾರ ಚಿತ್ರವನ್ನು ಎಡಿಟ್ ಮಾಡಲಾಗುತ್ತಿದೆ’ ಎಂದು ಇಟಾಲಿಯನ್ ಭಾಷೆಯಲ್ಲಿ ‘ಹೊಂಬಾಳೆ ಫಿಲ್ಮ್ಸ್’ ಟ್ವೀಟ್ ಮಾಡಿದೆ. ಜಪಾನಿ ಭಾಷೆಯಲ್ಲೂ ರಿಲೀಸ್ ಮಾಡಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
‘ಕಾಂತಾರ’ ಸಿನಿಮಾದ ಬಳಿಕ ರಿಷಬ್ ಶೆಟ್ಟಿ ಅವರ ಖ್ಯಾತಿ ವಿಶ್ವಮಟ್ಟದಲ್ಲಿ ಹಬ್ಬಿದೆ. ಇತ್ತೀಚೆಗಷ್ಟೇ ಅವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದರು. ಜೆನಿವಾದಲ್ಲೂ ಈ ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಲಾಗಿತ್ತು. ಈ ಚಿತ್ರದಲ್ಲಿ ನಟಿಸಿದ ಸಪ್ತಮಿ ಗೌಡ ಅವರಿಗೂ ಚಿತ್ರರಂಗದಲ್ಲಿ ಭರ್ಜರಿ ಡಿಮ್ಯಾಂಡ್ ಸೃಷ್ಟಿ ಆಗಿದೆ.
ಇದನ್ನೂ ಓದಿ: Laughing Buddha: ಕಾಂತಾರ 2 ನಿರ್ದೇಶಕ್ಕೆ ಮುನ್ನ ಹೊಸ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅವರು ‘ಕಾಂತಾರ 2’ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಳೆಗಾಲದಲ್ಲಿ ಈ ಚಿತ್ರದ ಶೂಟಿಂಗ್ ಆರಂಭ ಆಗುವ ಸಾಧ್ಯತೆ ಇದೆ. ಅಭಿಮಾನಿಗಳು ಈ ಸಿನಿಮಾ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:08 am, Sun, 19 March 23