
‘ಪ್ರೇಮದ ಊರಲಿ’ ಸಿನಿಮಾ ಗೆಲುವಿನ ಬಳಿಕ ಅನೇಕ ಕಲಾವಿದರ ಬದುಕು ಬದಲಾಗಿದೆ. ನಿರ್ದೇಶಕ ಮನೋಜ್ ಕುಮಾರ್ ಖ್ಯಾತಿ ಹೆಚ್ಚಿದೆ. ಕಲಾವಿದರಾದ ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ರಂಗಾಯಣ ರಘು ಅವರ ಮಾಗಿದ ನಟನೆಗೆ ಪ್ರೇಕ್ಷಕರ ವರ್ಗದಿಂದ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರದಲ್ಲಿ ಬರುವ ಅಜ್ಜಿಯ ಪಾತ್ರಕ್ಕೂ ಪ್ರೇಕ್ಷಕರು ಉಘೇ ಎಂದಿದ್ದಾರೆ. ಈ ಪಾತ್ರ ಮಾಡಿರುವ ಇಳಾ ವಿಟ್ಲಾ ಅವರು ಈ ಯಶಸ್ಸಿನ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.
ಸಿನಿಮಾ 50 ದಿನ ಪೂರೈಸಿದ ಬಗ್ಗೆ ಮಾತನಾಡಿದ ಇಳಾ, ‘ಇದು ಒಂದು ರೀತಿಯ ಹಬ್ಬದ ವಾತಾವರಣ. ಎಲ್ಲರೂ ಸಂತೋಷವಾಗಿದ್ದಾರೆ. ಜನರು ಸಾಕಷ್ಟು ಪ್ರೀತಿ ತೋರಿಸುತ್ತಿದ್ದಾರೆ. 10 ಬಾರಿ, 15 ಬಾರಿ ಸಿನಿಮಾ ನೋಡಿದ್ದೇನೆ ಎನ್ನುತ್ತಾರೆ. ಈ ರೀತಿ ಸಿನಿಮಾ ಹಿಟ್ ಆದರೆ ಕಲಾವಿದರಿಗೆ ಕೆಲಸವೂ ಸಿಗುತ್ತದೆ’ ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ ನಟಿಯರು ತಮ್ಮ ವಯಸ್ಸಿನ ಅಥವಾ ವಯಸ್ಸಿಗಿಂತ ಕಡಿಮೆ ಇರುವ ಪಾತ್ರವನ್ನು ಕೇಳುತ್ತಾರೆ. ಆದರೆ, ಇಳಾ ಅವರು ಅಜ್ಜಿ ಪಾತ್ರ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಅಜ್ಜಿ ಆಗೋವರೆಗೆ ನಾವು ಇರ್ತಿವೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ, ಅದಕ್ಕೂ ಮೊದಲೇ ಅಜ್ಜಿಯ ಪಾತ್ರ ಮಾಡಿದ್ದೇನೆ. ಅಜ್ಜಿಯ ಪಾತ್ರ ಮಾಡಿದ ಖುಷಿ ನನಗೆ ಇದೆ. ನಮ್ಮ ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ಯಾವಾಗಲೂ ಚಾಲೆಂಜಿಂಗ್ ಪಾತ್ರಗಳನ್ನು ನೀಡಿಯೇ ಅಭ್ಯಾಸ. ಈ ಪಾತ್ರ ಕೂಡ ಚಾಲೆಂಜ್ ಆಗಿತ್ತು’ ಎಂದಿದ್ದಾರೆ.
ಸೀರಿಯಲ್ಗಳಲ್ಲಿ ಇಳಾ ಅವರಿಗೆ ನೆಗೆಟಿವ್ ಪಾತ್ರಗಳೇ ಹುಡುಕಿ ಬರುತ್ತಿವೆ. ಈ ಬಗ್ಗೆ ಮಾತನಾಡಿರೋ ಅವರು, ‘ಧಾರಾವಾಹಿಗಳಲ್ಲಿ ಬದಲಾವಣೆ ತರಬಹುದು, ಆದರೆ ತರಲ್ಲ. ವಿಲನ್ ಆಗಿ ಗುರುತಿಸಿಕೊಂಡರೆ ನಂತರ ಅವರಿಗೆ ವಿಲನ್ ಪಾತ್ರಗಳನ್ನೇ ಆಫರ್ ಮಾಡಲಾಗುತ್ತದೆ. ಈ ಕಾರಣಕ್ಕೆ ಸೀರಿಯಲ್ಗೆ ಬ್ರೇಕ್ ಕೊಟ್ಟು ಸಿನಿಮಾಗೆ ಬಂದೆ. ಮನೋಜ್ ಅವರ ಅಕ್ಷಿ ಸಿನಿಮಾಗೆ ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಅಜ್ಜಿ ಪಾತ್ರ ಮಾಡಬಹುದು ಎಂದು ನಿರ್ದೇಶಕರಿಗೆ ನಂಬಿಕೆ ಇತ್ತು’ ಎಂದಿದ್ದಾರೆ ಅವರು.
ಇದನ್ನೂ ಓದಿ: ಸೈಲೆಂಟ್ ಆಗಿ ಒಟಿಟಿಗೆ ಲಗ್ಗೆ ಇಟ್ಟ ‘ಪ್ರೇಮದ ಊರಲಿ’ ಸಿನಿಮಾ; ಎಲ್ಲಿ ವೀಕ್ಷಿಸಬಹುದು?
‘ಪ್ರೇಮದ ಊರಲಿ ಸಕ್ಸಸ್ ದೊಡ್ಡ ಖುಷಿ ಕೊಟ್ಟಿದೆ ನಿಜ. ಇದಕ್ಕಿಂತ ಹೆಚ್ಚು ರಾಷ್ಟ್ರ ಪ್ರಶಸ್ತಿ ಸಿನಿಮಾದಲ್ಲಿ ನಟಿಸಿದ್ದು ಮತ್ತಷ್ಟು ಖುಷಿ ಕೊಟ್ಟಿದೆ’ ಎನ್ನುತ್ತಾರೆ ಇಳಾ ವಿಟ್ಲಾ. ‘ಪ್ರೇಮದ ಊರಲಿ’ ಬಳಿಕ ಅವರಿಗೆ ಹಲವು ಆಫರ್ ಬರುತ್ತಿದೆ. ಅಳೆದು ತೂಗಿ ಅವನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.