ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಜೋಗಿ ಪ್ರೇಮ್ (Jogi Prem) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ನಿರ್ದೇಶನ ಮಾಡಿದ ಹಲವು ಸಿನಿಮಾಗಳು ಜನಮನ ಗೆದ್ದಿವೆ. ಈ ಮೊದಲು ನಟನೆಯಲ್ಲೂ ಅವರು ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದುಂಟು. ಸದ್ಯ ಅವರು ನಟ ಧ್ರುವ ಸರ್ಜಾ ಅಭಿನಯದ ಹೊಸ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅದರ ನಡುವೆಯೇ ಹೊಸ ನ್ಯೂಸ್ ಕೇಳಿಬಂದಿದೆ. ಹೀರೋ ಆಗಿ ಅಭಿಮಾನಿಗಳನ್ನು ರಂಜಿಸಲು ಜೋಗಿ ಪ್ರೇಮ್ ಮತ್ತೆ ಸಜ್ಜಾಗಿದೆ. ಆ ಮೂಲಕ ಬಹುದಿನಗಳ ಬಳಿಕ ಅವರು ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಈ ಬಾರಿ ಹೊಸ ನಿರ್ದೇಶಕ ಎಂ. ಶಶಿಧರ್ (M Shashidhar) ಅವರು ಜೋಗಿ ಪ್ರೇಮ್ಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಸಿನಿಮಾ ತುಂಬ ಡಿಫರೆಂಟ್ ಆಗಿರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಎಂ ಶಶಿಧರ್ ಈಗಿನ್ನೂ 28ರ ಹರೆಯದವರು. ಮೂಲತಃ ಮೈಸೂರಿನವರಾದ ಅವರು ಫಿಲ್ಮ್ ಮೇಕಿಂಗ್ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ವಿಎಫ್ಎಕ್ಸ್ ಬಗ್ಗೆ ಹೆಚ್ಚು ತಿಳಿದುಕೊಂಡು ಅವರು ನಿರ್ದೇಶನಕ್ಕೆ ಇಳಿದಿದ್ದಾರೆ. ಶಿವರಾಜ್ಕುಮಾರ್ ಅಭಿನಯದ, ಪ್ರೇಮ್ ನಿರ್ದೇಶನದ ‘ಜೋಗಿ’ ಚಿತ್ರಕ್ಕೆ ಬಂಡವಾಳ ಹೂಡಿದ್ದ ‘A2 ಫಿಲ್ಮ್ಸ್’ ಮೂಲಕವೇ ಈ ಹೊಸ ಚಿತ್ರ ನಿರ್ಮಾಣ ಆಗಲಿದೆ. ಅದರ ಜೊತೆ ‘ಪ್ರೇಮ್ ಡ್ರೀಮ್ಸ್’ ಸಂಸ್ಥೆ ಜೊತೆಯಾಗಿ ಬಂಡವಾಳ ಹೂಡುತ್ತಿದೆ.
ವಿಶೇಷ ಎಂದರೆ, ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗಲಿದೆ. ಸದ್ಯಕ್ಕೆ ಇನ್ನೂ ಶೀರ್ಷಿಕೆ ಬಹಿರಂಗ ಆಗಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಇದರಲ್ಲಿ ಬಹುಭಾಷಾ ನಟ-ನಟಿಯರು ಬಣ್ಣ ಹಚ್ಚಲಿದ್ದಾರೆ. ಅದಕ್ಕೆ ತಕ್ಕಂತೆ ಚಿತ್ರದ ಬಜೆಟ್ ಕೂಡ ಅದ್ದೂರಿಯಾಗಿ ಇರಲಿದೆ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಪ್ರೇಮ್ ಅಭಿಮಾನಿಗಳು ಕಾದಿದ್ದಾರೆ.
ಈ ಸಿನಿಮಾ ಮೂಲಕ ಪ್ರೇಮ್ ಅವರು ಹೊಸ ಸಾಹಸ ಮಾಡಲಿದ್ದಾರೆ. ದಕ್ಷಿಣ ಭಾರತದಲ್ಲಿ ಇದೇ ಮೊದಲ ಜೋಂಬಿ ಚಿತ್ರವಾಗಿ ಈ ಸಿನಿಮಾ ಮೂಡಿಬರಲಿದೆ. ಸೈಕಾಲಾಜಿಕಲ್ ಥ್ರಿಲ್ಲರ್ ಕಥೆಯನ್ನು ಈ ಸಿನಿಮಾ ಹೊಂದಿರಲಿದೆ. ಪ್ರೇಮ್ ಜೊತೆ ಯಾರೆಲ್ಲ ನಟಿಸುತ್ತಾರೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಸಂಪೂರ್ಣ ಹೊಸ ಗೆಟಪ್ ಮತ್ತು ಡಿಫರೆಂಟ್ ಲುಕ್ನಲ್ಲಿ ಪ್ರೇಮ್ ಅವರನ್ನು ತೋರಿಸಲು ನಿರ್ದೇಶಕ ಎಂ. ಶಶಿಧರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಕ್ಟೋಬರ್ 22ಕ್ಕೆ ಪ್ರೇಮ್ ಹುಟ್ಟುಹಬ್ಬ. ಆ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ನಿರ್ದೇಶನದಲ್ಲಿ ಬ್ಯುಸಿ ಆಗಿರುವ ಪ್ರೇಮ್ ಅವರು ಮತ್ತೆ ಹೀರೋ ಆಗಲು ಒಪ್ಪಿಕೊಂಡಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:19 pm, Wed, 19 October 22