ಸ್ನೀಕ್ ಪೀಕ್ ಟೀಸರ್​ ಬಿಡುಗಡೆ ಮಾಡಿದ ‘ಪಿವೋಟ್’ ಚಿತ್ರತಂಡ

ಮದ್ಯ ವ್ಯಸನದ ಕಹಾನಿಯನ್ನೇ ಕೇಂದ್ರವಾಗಿ ಇಟ್ಟುಕೊಂಡು ‘ಪಿವೋಟ್’ ಸಿನಿಮಾವನ್ನು ಮಾಡಲಾಗಿದೆ. ಕಾರ್ತಿಕ್ ರಾಜನ್ ನಿರ್ದೇಶನ ಮಾಡಿದ ಈ ಚಿತ್ರದಲ್ಲಿ ಅಶ್ವಿನಿ ಚಾವ್ರೆ, ಎಂ.ಎನ್. ಲಿಖಿತ್ ಜೋಡಿಯಾಗಿ ನಟಿಸಿದ್ದಾರೆ. ಸ್ನೀಕ್ ಪೀಕ್ ಮೂಲಕ ಕುತೂಹಲ ಮೂಡಿಸಲಾಗುತ್ತಿದೆ. ಈ ಸಿನಿಮಾದ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ಸ್ನೀಕ್ ಪೀಕ್ ಟೀಸರ್​ ಬಿಡುಗಡೆ ಮಾಡಿದ ‘ಪಿವೋಟ್’ ಚಿತ್ರತಂಡ
Peotu Movie Poster

Updated on: Jan 26, 2025 | 4:56 PM

ಅತಿಯಾಗಿ ಕುಡಿತದ ಚಟಕ್ಕೆ ಒಳಗಾದವರನ್ನು ಪಿವೋಟ್ ಅಂತಾರೆ. ಈಗ ಅದೇ ಶೀರ್ಷಿಕೆಯಲ್ಲಿ ಒಂದು ಸಿನಿಮಾ ಮೂಡಿಬರುತ್ತಿದೆ. ಮದ್ಯವ್ಯಸನಕ್ಕೆ ದಾಸರಾದ ವ್ಯಕ್ತಿಗಳನ್ನು ಅದರಿಂದ ಹೊರಗೆ ತರುವುದು ಸುಲಭವಲ್ಲ. ಈ ರೀತಿಯ ಕಥೆಯನ್ನೇ ಇಟ್ಟುಕೊಂಡು ‘ಪಿವೋಟ್’ ಸಿನಿಮಾವನ್ನು ಮಾಡಲಾಗಿದೆ. ಹೊಸ ನಿರ್ದೇಶಕ ಕಾರ್ತಿಕ್ ರಾಜನ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಎಂ.ಎನ್. ಲಿಖಿತ್ ಮತ್ತು ಮರಾಠಿ‌ ಮೂಲದ ನಟಿ ಅಶ್ವಿನಿ ಚಾವ್ರೆ ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

‘ಪಿವೋಟ್’ ಸಿನಿಮಾಗೆ ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಗಣ ರಾಜ್ಯೋತ್ಸವದ ಪ್ರಯುಕ್ತ ಇಂದು (ಜನವರಿ 26) ಸಂಜೆ ಈ ಸಿನಿಮಾದ ಸ್ನೀಕ್ ಪೀಕ್ ಟೀಸರ್ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಕಾನ್ಸೆಪ್ಟ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಸಾಮಾನ್ಯವಾಗಿ ಕುಡುಕರಿಗೆ ಎಲ್ಲರೂ ಬೈಯುತ್ತಾರೆ. ಹಾಗಿದ್ದರೂ ಅಂಥವರ ಕಥೆಯನ್ನೇ ಕೇಂದ್ರವಾಗಿ ಇಟ್ಟುಕೊಂಡ ಸಿನಿಮಾ ಮಾಡಲಾಗಿದೆ. ‘ಮದ್ಯವ್ಯಸನಿಗಳನ್ನು ಬಯ್ಯುವುದಷ್ಟೇ ನಮಗೆ ಗೊತ್ತು. ಆದರೆ ಆತ ಯಾಕೆ ಆ ರೀತಿ ಆದ? ಅದಕ್ಕೆ ಕಾರಣವಾದವರು ಯಾರು ಅಂತ ನಾವು ಒಮ್ಮೆಯೂ ಯೋಚಿಸಲ್ಲ. ಆ ಪ್ರಶ್ನೆಗಳ ಹಿಂದೆ ಕಥೆಗಳು ಇರುತ್ತವೆ. ಈ ಥರದ ಹಲವು ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಿದೆ’ ಎಂದಿದ್ದಾರೆ ಚಿತ್ರತಂಡದವರು.

ಡೈರೆಕ್ಟರ್​ ಕಾರ್ತಿಕ್ ರಾಜನ್ ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಹೊಂದಿರುವ ಅವರು ಈಗಾಗಲೇ 2 ಕಿರುಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಈಗ ‘ಪಿವೋಟ್’ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಈ ಮೊದಲು ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಈಗ ಸ್ನೀಕ್ ಪೀಕ್ ಮೂಲಕ ಸಿನಿಮಾದ ಕೌತುಕವನ್ನು ಹೆಚ್ಚಿಸಲು ಹೊರಟಿದೆ ಚಿತ್ರತಂಡ.

ಇದನ್ನೂ ಓದಿ: ಬಲವಂತದ ಮದುವೆ, ನಟಿಯ ವಿರುದ್ಧ ನಿರ್ದೇಶಕ ದೂರು

‘ಪಿವೋಟ್’ ಸಿನಿಮಾದಲ್ಲಿ ಒಟ್ಟು 6 ಗೀತೆಗಳು ಇವೆ. ಬಿ.ಆರ್. ಹೇಮಂತ್ ಕುಮಾರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಶಂಕು ಅವರು ಛಾಯಾಗ್ರಹಣ ಮಾಡಿದ್ದಾರೆ. ಈ ಸಿನಿಮಾದ ಮೂಲಕ ಯುವಜನತೆಗೆ ಬೇಕಾಗುವಂತಹ ಸಂದೇಶ ನೀಡುವುದಾಗಿ ಚಿತ್ರತಂಡ ಹೇಳಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ‘ಪಿವೋಟ್’ ಸಿನಿಮಾ ಬಿಡುಗಡೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us