
ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಮತ್ತು ನಿರ್ದೇಶಕ. ನಿರ್ಮಾಪಕರಾಗಿಯೂ ಸಹ ದೊಡ್ಡ ಯಶಸ್ಸನ್ನು ಅವರು ‘ಸು ಫ್ರಂ ಸೋ’ ಸಿನಿಮಾ ಮೂಲಕ ಪಡೆದುಕೊಂಡಿದ್ದಾರೆ. ರಾಜ್ ಬಿ ಶೆಟ್ಟಿಯ ನಟನೆಗೆ ಇರುವಂತೆಯೇ ಅವರ ನಿರ್ದೇಶನಕ್ಕೂ ದೊಡ್ಡ ಅಭಿಮಾನಿ ವರ್ಗವೇ ಇದೆ. ನಿರ್ದೇಶನಕ್ಕೆ ತುಸು ಹೆಚ್ಚೇ ಅಭಿಮಾನಿಗಳಿದ್ದಾರೆ ಎನ್ನಬಹುದು. ಆದರೆ ಅವರು ಕಳೆದ ಮೂರು ವರ್ಷದಿಂದಲೂ ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ. 2023ರಲ್ಲಿ ಬಂದ ‘ಸ್ವಾತಿ ಮುತ್ತಿನ ಮಳೆಹನಿ’ ರಾಜ್ ನಿರ್ದೇಶಿಸಿದ ಕೊನೆಯ ಸಿನಿಮಾ. ಆದರೆ ಇದೀಗ ಅವರು ಸದ್ದಿಲ್ಲದೆ ಹೊಸ ಸಿನಿಮಾ ನಿರ್ದೇಶನ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
2017ರಲ್ಲಿ ಬಿಡುಗಡೆ ಆದ ‘ಒಂದು ಮೊಟ್ಟೆಯ ಕತೆ’ ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಬಳಿಕ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ನಿರ್ದೇಶಿಸಿದರು ಅದೂ ಸಹ ಬ್ಲಾಕ್ ಬಸ್ಟರ್ ಎನಿಸಿಕೊಂಡಿತು. 2023ರಲ್ಲಿ ‘ಸ್ವಾತಿ ಮುತ್ತಿನ ಮಳೆಹನಿ’ ಸಿನಿಮಾ ನಿರ್ದೇಶಿಸಿದರು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಹಿಟ್ ಆಗದಿದ್ದರು ವಿಮರ್ಶಕರ ಮೆಚ್ಚುಗೆ ಗಳಿಸಿಕೊಂಡಿತು. ಆದರೆ 2023ರ ಬಳಿಕ ಅವರು ನಟನೆ ಮತ್ತು ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡು, ನಿರ್ದೇಶನದಿಂದ ಸಣ್ಣ ಬಿಡುವು ಪಡೆದಿದ್ದರು.
ಆದರೆ ಇದೀಗ ಅವರು ಮತ್ತೊಮ್ಮೆ ನಿರ್ದೇಶನಕ್ಕೆ ಇಳಿದಿದ್ದು, ಸದ್ದಿಲ್ಲದೆ ಹೊಸ ಸಿನಿಮಾ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಈಗಾಗಲೇ ಸುಮಾರು 30 ದಿನಗಳ ಚಿತ್ರೀಕರಣವನ್ನು ಸಹ ಅವರು ಮುಗಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಸಿನಿಮಾ ಥ್ರಿಲ್ಲರ್ ಮಾದರಿಯ ಕತೆ ಹೊಂದಿದ್ದು, ಮಂಗಳೂರಿನ ಹಿನ್ನೆಲೆಯಲ್ಲಿ ನಡೆಯುವ ಕತೆ ಇದಾಗಿದೆಯಂತೆ. ಸಿನಿಮಾದ ಪಾತ್ರವರ್ಗ ಇನ್ನಿತರೆ ವಿಷಯಗಳನ್ನು ರಾಜ್ ಬಿ ಶೆಟ್ಟಿ ಅವರು ಇನ್ನಷ್ಟೆ ಘೋಷಣೆ ಮಾಡಬೇಕಿದೆ.
ಇದನ್ನೂ ಓದಿ:ಒಟಿಟಿಗೆ ಬರಲಿದೆ ರಾಜ್ ಬಿ ಶೆಟ್ಟಿ ನಟನೆಯ ಹಿಂದಿ ಸಿನಿಮಾ, ಎಲ್ಲಿ? ಯಾವಾಗ?
ರಾಜ್ ಬಿ ಶೆಟ್ಟಿ ನಟನೆಯ ‘ಕರಾವಳಿ’ ಸಿನಿಮಾ ಕೆಲ ತಿಂಗಳ ಹಿಂದಷ್ಟೆ ರಿಲೀಸ್ ಆಗಿದ್ದು ನಿರೀಕ್ಷಿತ ಪ್ರದರ್ಶನವನ್ನು ಚಿತ್ರಮಂದಿರದಲ್ಲಿ ಕಾಣಲಿಲ್ಲ. ಪ್ರಸ್ತುತ ಅವರು ತಮಿಳಿನ ‘ಪಾಕೆಟ್ ನಾವೆಲ್’ ಮತ್ತು ‘ಸಿಯೋನ್’ ಹೆಸರಿನ ಎರಡು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಅದಾದ ಬಳಿಕ ಒಂದು ಮಲಯಾಳಂ ಸಿನಿಮಾನಲ್ಲೂ ನಟನೆ ಮಾಡಲಿದ್ದಾರೆ. ಒಂದು ಹೊಸ ಕನ್ನಡ ಸಿನಿಮಾವನ್ನೂ ಸಹ ರಾಜ್ ಬಿ ಶೆಟ್ಟಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ‘ಸು ಫ್ರಂ ಸೋ’ ನಿರ್ದೇಶಕನ ಹೊಸ ಸಿನಿಮಾಕ್ಕೂ ಇವರೇ ಬಂಡವಾಳ ಹೂಡುತ್ತಿದ್ದಾರೆ ಎಂಬ ಮಾತುಗಳು ಸಹ ಹರಿದಾಡುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ