
ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್‌ಕುಮಾರ್ ಮತ್ತು ಅವರ ಧರ್ಮಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರ ದಾಂಪತ್ಯ ಇಡೀ ಚಿತ್ರರಂಗಕ್ಕೇ ಒಂದು ಮಾದರಿ. ಅಣ್ಣಾವ್ರ ಪ್ರತಿಯೊಂದು ಯಶಸ್ಸಿನ ಹಿಂದೆಯೂ ಪಾರ್ವತಮ್ಮ ಅವರ ಬೆಂಬಲ ಮತ್ತು ಅಪ್ರತಿಮ ಶ್ರಮವಿತ್ತು. ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಲೇ ರಾಜ್ ಕುಟುಂಬವನ್ನು ಮುನ್ನಡೆಸಿದ್ದ ಪಾರ್ವತಮ್ಮ ಅವರು, ತಮ್ಮ ಪತಿಯ ಬಗ್ಗೆ ಆಡಿದ್ದ ಅಪರೂಪದ ಹಾಗೂ ಭಾವುಕ ಮಾತುಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.
ಆ ಸಂದರ್ಶನದಲ್ಲಿ ಪಾರ್ವತಮ್ಮ ಅವರು ಅಣ್ಣಾವ್ರೊಂದಿಗಿನ ತಮ್ಮ ಸುದೀರ್ಘ ಬಾಂಧವ್ಯವನ್ನು ನೆನಪಿಸಿಕೊಂಡು ಅತ್ಯಂತ ಭಾವುಕರಾಗಿ ಮಾತನಾಡಿದ್ದರು. ‘ನಾನು ಮದುವೆಯಾಗಿ ಬಂದ ದಿನದಿಂದ ಹಿಡಿದು ಅವರು ಸಾಯುವವರೆಗೂ ಅವರ ನಡವಳಿಕೆಯಲ್ಲಿ ನಾನು ಯಾವುದೇ ರೀತಿಯ ಬದಲಾವಣೆಯನ್ನು ಕಾಣಲಿಲ್ಲ. ನನ್ನ ಮೇಲೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ಹಾಗೆಯೇ ನನಗೂ ಅವರ ಮೇಲೆ ಅಷ್ಟೇ ಅಗಾಧವಾದ ಪ್ರೇಮವಿತ್ತು. ಅದೇ ನಂಬಿಕೆಯಲ್ಲಿ ನಾನು 53 ವರ್ಷಗಳ ಕಾಲ ಅವರ ಜೊತೆ ಹಾಗೇ ಬದುಕಿಬಿಟ್ಟೆ’ ಎಂದು ದಾಂಪತ್ಯದ ಸುಂದರ ದಿನಗಳನ್ನು ನೆನದಿದ್ದಾರೆ.
ಮಾತು ಮುಂದುವರಿಸಿದ ಪಾರ್ವತಮ್ಮ ಅವರು, ಅಣ್ಣಾವ್ರು ತಮಗೆ ಎಷ್ಟು ಮುಖ್ಯ ಎಂಬುದನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ. ‘ರಾಜಕುಮಾರ್ ನನ್ನ ವಸ್ತು. ಅದನ್ನು ನನ್ನಿಂದ ಯಾರೂ ಕಿತ್ತುಕೊಳ್ಳಲು ಆಗಲ್ಲ. ನನ್ನದು ಕೊನೆವರೆಗೂ ನನ್ನದಾಗಿಯೇ ಉಳಿದುಕೊಂಡಿತ್ತು’ ಎಂದು ಅತ್ಯಂತ ಹೆಮ್ಮೆಯಿಂದ ನುಡಿದಿದ್ದಾರೆ.
ಇದನ್ನೂ ಓದಿ: ರಾಜ್‌ಕುಮಾರ್ ಹಾಗೂ ಪಾರ್ವತಮ್ಮಗೆ ಇಷ್ಟ ಆಗಿತ್ತು ಆ ಒಂದು ಸಿನಿಮಾ
ಈ ಅಪರೂಪದ ವಿಡಿಯೋ ಅಣ್ಣಾವ್ರ ಅಭಿಮಾನಿಗಳ ಕಣ್ಣಾಲಿಗಳನ್ನು ತುಂಬಿ ಬರುವಂತೆ ಮಾಡಿದ್ದು, ಆದರ್ಶ ದಂಪತಿಗಳಿಗೆ ಇವರಿಗಿಂತ ದೊಡ್ಡ ಉದಾಹರಣೆ ಸಿಗಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:45 am, Wed, 15 July 26