
ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ಕ್ರಮವನ್ನು ಪ್ರಶ್ನಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾ. ಜೆ.ಬಿ.ಪರ್ದಿವಾಲಾ, ನ್ಯಾ. ಕೆ.ವಿನೋದ್ ಚಂದ್ರನ್ ಅವರಿರುವ ಪೀಠದಲ್ಲಿ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ವಿಜಯಲಕ್ಷ್ಮಿ ಪರ ವಕೀಲರಿಗೆ ಕೆಲವು ಪ್ರಶ್ನೆಗಳನ್ನು ಕೋರ್ಟ್ ಕೇಳಿದೆ. ಸದ್ಯ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 14ಕ್ಕೆ ಮುಂದೂಡಲಾಗಿದೆ.
ಇಂದು (ಅಕ್ಟೋಬರ್ 7) ಸುಪ್ರೀಂ ಕೋರ್ಟ್‌ನಲ್ಲಿ ಈ ಅರ್ಜಿಯ ವಿಚಾರಣೆ ಆರಂಭವಾಯಿತು. ವಿಜಯಲಕ್ಷ್ಮಿ ದರ್ಶನ್ ಪರವಾಗಿ ಹಿರಿಯ ವಕೀಲ ನಾಗಮುತ್ತು ವಾದ ಮಂಡಿಸಿ, ‘59ನೇ ಸಿವಿಲ್ ಕೋರ್ಟ್ ನೀಡಿದ ಆದೇಶವು ಸುಪ್ರೀಂ ಕೋರ್ಟ್‌ನ ತೀರ್ಪುಗಳಿಗೆ ವಿರುದ್ಧವಾಗಿದೆ. ಪ್ರದೋಷ್‌ನನ್ನು ಮಾಫಿ ಸಾಕ್ಷಿ ಮಾಡುವ ಮುನ್ನ ಸಿಆರ್‌ಪಿಸಿ 164 ಅಡಿಯಲ್ಲಿ ಯಾವುದೇ ಹೇಳಿಕೆ ಪಡೆದಿಲ್ಲ. ಸಹ ಆರೋಪಿಗಳಿಗೆ ಮಾಹಿತಿ ನೀಡದೆ, ಅಂಧಕಾರದಲ್ಲಿಟ್ಟು ಮಾಫಿ ಸಾಕ್ಷಿ ಅರ್ಜಿ ಸಲ್ಲಿಸಲಾಗಿದೆ’ ಎಂದು ಕೋರ್ಟ್‌ಗೆ ತಿಳಿಸಿದರು.
ವಾದ ಆಲಿಸಿದ ಸುಪ್ರೀಂ ಕೋರ್ಟ್ ಪೀಠವು, ‘ಪ್ರದೋಷ್ನ ಮಾಫಿ ಸಾಕ್ಷಿಯಾಗಿ ಏಕೆ ಪರಿಗಣಿಸಬಾರದು? ಅವರು ಏನು ಹೇಳುತ್ತಾರೆ ಎಂಬುದು ನಮಗೆ ಗೊತ್ತಿಲ್ಲ. ಪ್ರದೋಷ್ ಪರ ವಕೀಲರೇ ಮಾಫಿ ಸಾಕ್ಷಿ ಅರ್ಜಿ ಸಲ್ಲಿಸಿದ್ದಾರಲ್ಲವೇ? ಅದನ್ನು ಹೈಕೋರ್ಟ್ ಎತ್ತಿಹಿಡಿದಿದೆಯಲ್ಲವೇ?’ ಎಂದು ವಕೀಲರನ್ನು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ನಾಗಮುತ್ತು, ‘ಸಹ ಆರೋಪಿಗೆ ಆತ ಏನು ಹೇಳಲು ಹೊರಟಿದ್ದಾನೆ ಎಂಬುದು ಸ್ಪಷ್ಟವಾಗಿ ತಿಳಿಯಬೇಕು’ ಎಂದು ಈ ಸಂಬಂಧಿತ ಫಾಸ್ಕಲ್ ಫರ್ನಾಂಡೀಸ್ ಹಾಗೂ ಅಶೋಕ್ ಕುಮಾರ್ ಅಗರ್ವಾಲ್ ಪ್ರಕರಣಗಳ ಹಳೆಯ ತೀರ್ಪುಗಳನ್ನು ಉಲ್ಲೇಖಿಸಿ ವಾದಿಸಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಕರಣ: ಕೋರ್ಟ್ ಕಲಾಪದ ವಿಡಿಯೋ ಹಂಚಿಕೊಂಡವರಿಗೆ ನೊಟೀಸ್
ವಕೀಲರು ಉಲ್ಲೇಖಿಸಿದ ಹಿಂದಿನ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.