
ಕನ್ನಡ ಚಿತ್ರರಂಗದಲ್ಲಿ ಕೌಟುಂಬಿಕ ಕಥಾಹಂದರದ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆದು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅದೇ ಸಾಲಿನಲ್ಲಿ ಮತ್ತೊಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ‘ಶಬರಿ’ ಕೂಡ ತೆರೆಗೆ ಬರಲು ಸಿದ್ಧವಾಗಿದೆ. ಈ ಹಿಂದೆ ‘ಒರಟ’, ‘ಕೋರ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಒರಟ ಶ್ರೀ ಅವರು ಈಗ ‘ಶಬರಿ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ರವಿ ಶ್ರೀವತ್ಸ , ಒರಟ ಪ್ರಶಾಂತ್, ಭೂಮಿಕಾ, ಪ್ರವೀಣ್ , ಕೋಟೆ ಪ್ರಭಾಕರ್, ಉದ್ಯಮಿ ಪ್ರಶಾಂತ್ ಚಕ್ರವರ್ತಿ ಮುಂತಾದವರು ಟ್ರೇಲರ್ ರಿಲೀಸ್ ಕಾರ್ಯಕ್ರಮದ ವೇಳೆ ಹಾಜರಿದ್ದರು. ನಿರ್ದೇಶಕ ಒರಟ ಶ್ರೀ ಹಾಗೂ ಚಿತ್ರತಂಡದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ‘ಭಾರವಿ ಫಿಲ್ಮ್ಸ್’ ಮೂಲಕ ರಮೇಶ್ ಬಿ., ಬದ್ರಿ ಮತ್ತು ವಿಷ್ಣುಕಾಂತ್ ಎ. ಅವರು ಒಟ್ಟಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ಇದೊಂದು ಕುಟುಂಬ ಸಮೇತ ಕುಳಿತು ನೋಡಬಹುದಾದ ಸಾಂಸಾರಿಕ ಕಥಾಹಂದರದ ಚಿತ್ರವಾಗಿದೆ ಎಂದು ಚಿತ್ರತಂಡ ಹೇಳಿದೆ. ನಿರ್ದೇಶಕ ಒರಟ ಶ್ರೀ ಮಾತನಾಡಿ, ‘ನಮ್ಮ ಚಿತ್ರದ ತಂದಾನಿ ತಾನೋ ಹಾಡು ಲಹರಿ ಆಡಿಯೋ ಸಂಸ್ಥೆಯ ಮೂಲಕ ಬಿಡುಗಡೆಯಾಗಿ ಎಲ್ಲೆಡೆ ಬಾರಿ ವೈರಲ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗ ಟ್ರೇಲರ್ ಬಿಡುಗಡೆ ಮಾಡಿದ್ದೇವೆ’ ಎಂದರು.
‘ನಮ್ಮ ಸಿನಿಮಾದಲ್ಲಿ ತಂದೆ-ಮಗಳ ಬಾಂಧವ್ಯ ಜೊತೆಗೆ ಜೀಪ್ ಕೂಡ ಒಂದು ಪ್ರಮುಖ ಪಾತ್ರವಾಗಿ ಕಾಣಿಸುತ್ತದೆ. ಅಂದುಕೊಂಡಂತಹ ಸಮಯದಲ್ಲೇ ಬಜೆಟ್ ಪ್ಲಾನ್ ಮಾಡಿಕೊಂಡು ಸಿನಿಮಾದ ಕೆಲಸಗಳನ್ನು ಮುಗಿಸಿದ್ದೇನೆ. ಸಸ್ಪೆನ್ಸ್ , ಥ್ರಿಲ್ಲರ್, ಮಿಸ್ಟ್ರಿ ಸೇರಿದಂತೆ ಅನೇಕ ಅಂಶಗಳಿರುವ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗಿದೆ’ ಎಂದು ನಿರ್ದೇಶಕರು ಮಾಹಿತಿ ನೀಡಿದರು.
ನಟ ಸಮರ್ಥ್ ಮಾತನಾಡಿ, ‘ನನ್ನ ಮೊದಲ ಸಿನಿಮಾದಲ್ಲಿ ಒಂದು ಉತ್ತಮ ಪಾತ್ರವನ್ನು ನಿರ್ವಹಿಸಿದ್ದೇನೆ. ಇದು ನನಗೆ ಯಾವಾಗಲೂ ನೆನಪಿನಲ್ಲಿ ಉಳಿಯುವಂತಹ ಸಿನಿಮಾ ಆಗಲಿದೆ. ನಿರ್ದೇಶಕರು ಹೇಳಿಕೊಟ್ಟಂತೆಯೇ ನಾನು ನಟಿಸಿದ್ದೇನೆ. ಸಹಕಲಾವಿದರು ಕೂಡ ನನಗೆ ಉತ್ತಮ ಬೆಂಬಲ ನೀಡಿದ್ದಾರೆ. ನಮ್ಮ ತಂದೆ ಕೂಡ ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರು. ಒಂದು ಉತ್ತಮ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಲು ಮುಂದಾಗಿದ್ದೇವೆ’ ಎಂದರು.
ಇದನ್ನೂ ಓದಿ: ಒರಟ ಶ್ರೀ ನಿರ್ದೇಶನದ ಹೊಸ ಸಿನಿಮಾ ‘ಶಬರಿ’; ಹೇಗಿದೆ ನೋಡಿ ಚಿತ್ರದ ಟೀಸರ್
ಬಿ.ಆರ್. ಹೇಮಂತ್ ಕುಮಾರ್ ಅವರ ಸಂಗೀತ ನಿರ್ದೇಶನ, ಸಾಮ್ರಾಟ್ ನಾಗರಾಜ್ ಅವರ ಛಾಯಾಗ್ರಹಣ, ಕೆ. ಗಿರೀಶ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಎಂ.ಕೆ. ಮಠ, ಸೀತಾ ಹರ್ಷವರ್ಧನ್, ನೀನಾಸಂ ಅಶ್ವತ್, ಮಂಡ್ಯ ಸಿದ್ದು, ಯೋಗೇಶ್ ವೀರ್ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಅಕ್ಟೋಬರ್ 23ರಂದು ಈ ಚಿತ್ರ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.