ತಮಿಳು ನಟ ಅಜಿತ್ ನಟನೆಯ ‘ಡೇರ್ ಡೆವಿಲ್’ ಚಿತ್ರಕ್ಕೆ ಶಿವಣ್ಣ ವಿಲನ್

ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ಹಾಗೂ ಆದಿಕ್ ರವಿಚಂದ್ರನ್ ಜೋಡಿಯ ಹೊಸ ಸಿನಿಮಾ ‘ಡೇರ್ ಡೆವಿಲ್’ ಚಿತ್ರದಲ್ಲಿ ಸ್ಯಾಂಡ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಖಳನಾಯಕನಾಗಿ ನಟಿಸಲಿದ್ದಾರೆ. ನವೆಂಬರ್ 17 ಅಥವಾ 18ರಿಂದ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು, ಚಿತ್ರರಂಗದಲ್ಲಿ ಈ ಸುದ್ದಿ ಭಾರೀ ಸಂಚಲನ ಸೃಷ್ಟಿಸಿದೆ.

ತಮಿಳು ನಟ ಅಜಿತ್ ನಟನೆಯ ‘ಡೇರ್ ಡೆವಿಲ್’ ಚಿತ್ರಕ್ಕೆ ಶಿವಣ್ಣ ವಿಲನ್
ಅಜಿತ್-ಶಿವಣ್ಣ

Updated on: Nov 16, 2026 | 1:15 PM

ಮುಖ್ಯಾಂಶಗಳು

  • ಅಜಿತ್ ಕುಮಾರ್ ಸಿನಿಮಾದಲ್ಲಿ ಖಡಕ್ ವಿಲನ್ ಆದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್
  • ನಿರ್ದೇಶಕ ಅದಿಕ್ ರವಿಚಂದ್ರನ್ ಹಾಗೂ ಅಜಿತ್ ಸಿನಿಮಾದಲ್ಲಿ ಶಿವಣ್ಣ
  • ಹೈದರಾಬಾದ್‌ನಲ್ಲಿ ಭರ್ಜರಿಯಾಗಿ ಮುಂದುವರಿದ ‘ಡೇರ್ ಡೆವಿಲ್’ ಚಿತ್ರ

ತಮಿಳು ನಟ ಅಜಿತ್ ಕುಮಾರ್ ಹಾಗೂ ನಿರ್ದೇಶಕ ಅದಿಕ್ ರವಿಚಂದ್ರನ್ ಅವರ ಹೊಸ ಸಿನಿಮಾದ ಬಗ್ಗೆ ಭಾರಿ ಕುತೂಹಲ ಮೂಡಿದೆ. ‘ಡೇರ್ ಡೆವಿಲ್’ ಎಂದು ಈ ಚಿತ್ರಕ್ಕೆ ಟೈಟಲ್ ಇಡಲಾಗಿದೆ. ಈ ಸಿನಿಮಾದಲ್ಲಿ ಖಳನಾಯಕನ ಪಾತ್ರ ಯಾರು ಮಾಡಲಿದ್ದಾರೆ ಎಂಬ ಚರ್ಚೆ ಜೋರಾಗಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ ಅಜಿತ್ ವಿರುದ್ಧ ವಿಲನ್ ಆಗಿ ನಟಿಸುವುದು ಅಧಿಕೃತವಾಗಿದೆ.

ಈ ಬಗ್ಗೆ ಅಜಿತ್ ಅವರ ಮ್ಯಾನೇಜರ್ ಸುರೇಶ್ ಚಂದ್ರ ಮಾಹಿತಿ ನೀಡಿದ್ದಾರೆ. ‘ಸಿನಿಮಾದಲ್ಲಿ ಅತಿ ಶಕ್ತಿಶಾಲಿ ಹಾಗೂ ಪ್ರಮುಖವಾದ ಖಳನಾಯಕನ ಪಾತ್ರವಿದೆ. ಈ ಪಾತ್ರಕ್ಕಾಗಿ ಹಲವು ನಾಯಕರ ಹೆಸರುಗಳನ್ನು ಲಿಸ್ಟ್​​ನಲ್ಲಿ ಸೇರಿಸಲಾಗಿತ್ತು. ಅಜಿತ್ ಅವರಿಗೆ ಶಿವಣ್ಣನ ಮೇಲೆ ಅಪಾರ ಗೌರವವಿದೆ. ಹೀಗಾಗಿ ಇವರೇ ಈ ಪಾತ್ರಕ್ಕೆ ಸರಿಯಾದ ವ್ಯಕ್ತಿ ಎಂದು ನಿರ್ಧರಿಸಿ ಸಂಪರ್ಕಿಸಲಾಯಿತು’ ಎಂದು ಅವರು ತಿಳಿಸಿದ್ದಾರೆ.

Loading...

ಮೂರು ನಾಲ್ಕು ತಿಂಗಳ ಹಿಂದೆಯೇ ಚಿತ್ರತಂಡ ಶಿವರಾಜ್‌ಕುಮಾರ್ ಅವರನ್ನು ಸಂಪರ್ಕಿಸಿತ್ತು. ನಿರ್ದೇಶಕ ಅದಿಕ್ ನೇರವಾಗಿ ಶಿವಣ್ಣ ಅವರಿಗೆ ಕಥೆ ಹೇಳಿದಾಗ ಅವರು ತಕ್ಷಣವೇ ಒಪ್ಪಿಗೆ ಸೂಚಿಸಿದರು. ಬಳಿಕ ಅಜಿತ್ ಅವರು ಶಿವಣ್ಣನ ಜೊತೆ ಮಾತನಾಡಿದರು ಎನ್ನಲಾಗಿದೆ. ನವೆಂಬರ್ 17 ಅಥವಾ 18ರಿಂದ ಶಿವಣ್ಣ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಸುರೇಶ್ ಚಂದ್ರ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಹಿಂದೆ ತಮಿಳಿನ ‘ಜೈಲರ್’, ‘ಕ್ಯಾಪ್ಟನ್ ಮಿಲ್ಲರ್’ ಮತ್ತು ‘ಜೈಲರ್ 2’ ಸಿನಿಮಾಗಳಲ್ಲಿ ನಟಿಸಿರುವ ಶಿವಣ್ಣ, ಈಗ ಅಜಿತ್ ಚಿತ್ರದಲ್ಲೂ ಪ್ರಮುಖ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಕಳೆದ ವಾರದಿಂದಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಪ್ರಭು, ಪಾರ್ಥಿಬನ್ ಹಾಗೂ ಶ್ರೀಲೀಲಾ ಸೇರಿದಂತೆ ಅನೇಕರು ಈ ಹಂತದ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಡಿಸೆಂಬರ್ ವರೆಗೆ ಈ ಶೆಡ್ಯೂಲ್ ಮುಂದುವರಿಯಲಿದೆ.

ಇದನ್ನೂ ಓದಿ: ‘ಭ್ರಮೆಯಲ್ಲಿ ಬದುಕಬೇಡಿ’; ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಶಿವರಾಜ್​ಕುಮಾರ್ ಕೌಂಟರ್

ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ತಮಿಳು ಚಿತ್ರರಂಗದಲ್ಲಿ ಸಾಲು ಸಾಲು ದೊಡ್ಡ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅಜಿತ್ ಕುಮಾರ್ ಜೊತೆಗಿನ ಈ ಮುಖಾಮುಖಿ ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಕನ್ನಡದ ಸ್ಟಾರ್ ನಟರೊಬ್ಬರು ತಮಿಳಿನ ಸ್ಟಾರ್ ನಟನಿಗೆ ವಿಲನ್ ಆಗಿ ನಟಿಸುತ್ತಿರುವುದು ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us