
ಭಾರತೀಯ ಸಿನಿಮಾ ರಂಗದಲ್ಲಿ ಸಲ್ಲಿಸಿದ ಸೇವೆಗೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ. ಈ ಪ್ರಶಸ್ತಿಗೆ ಭಾಜನರಾಗುವುದು ಭಾರತದ ಬಹುತೇಕ ಎಲ್ಲ ಸಿನಿಮಾ ಕಲಾವಿದ, ತಂತ್ರಜ್ಞರ ಕನಸು. 1969 ರಲ್ಲಿ ಕೊಡಲಾರಂಭಿಸಿದ ಈ ಅತ್ಯುತ್ತನ ಪ್ರಶಸ್ತಿಗೆ ಈ ವರೆಗೆ 54 ಮಂದಿ ಭಾಜನರಾಗಿದ್ದಾರೆ. ಕೇವಲ ಸಿನಿಮಾ ನಟ ನಟಿಯರು ಮಾತ್ರವೇ ಅಲ್ಲದೆ, ಸಿನಿಮಾ ರಂಗದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಲವಾರು ತಂತ್ರಜ್ಞರು, ಕಲಾವಿದರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ. ಈ ವರೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿರುವ 54 ಮಂದಿ ಮಹನೀಯರಲ್ಲಿ ಮೂವರು ಮಾತ್ರವೇ ಕರ್ನಾಟಕದ ಕಲಾವಿದರಿದ್ದಾರೆ. ಯಾರದು?
ಕನ್ನಡ ಚಿತ್ರರಂಗದ ಮೇರು ನಟ, ದಂತಕತೆ ಡಾ ರಾಜ್ಕುಮಾರ್, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಎನಿಸಿಕೊಂಡರು. ಡಾ ರಾಜ್ಕುಮಾರ್ ಅವರು ಚಿತ್ರರಂಗಕ್ಕೆ ಸಲ್ಲಿಸಿರುವ ಅಪರಿಮಿತ ಸೇವೆಯನ್ನು ಗುರುತಿಸಿ 1995ರಲ್ಲಿಯೇ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಈ ಅತ್ಯುನ್ನತ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡಿಗ ಎನಿಸಿಕೊಂಡರು ಡಾ ರಾಜ್ಕುಮಾರ್.
ಕನ್ನಡ ಸಿನಿಮಾ ಪ್ರೇಮಿಗಳಿಗೆ ಬಹುತೇಕ ಅಪರಿಚಿತ ಹೆಸರು ವಿಕೆ ಮೂರ್ತಿ. ಅಸಲಿಗೆ ಇವರು ಮೈಸೂರಿನವರು ಆದರೆ ಮಿಂಚಿದ್ದು ಮಾತ್ರ ಹಿಂದಿ ಸಿನಿಮಾ ರಂಗದಲ್ಲಿ. ಹಿಂದಿ ಚಿತ್ರರಂಗದ ತಂತ್ರಜ್ಞರು ವಿಶೇಷವಾಗಿ ಸಿನಿಮಾಟೊಗ್ರಾಫರ್ಗಳು ಇಂದಿಗೂ ವಿಕೆ ಮೂರ್ತಿ ಅವರನ್ನು ಅಭ್ಯಾಸ ಮಾಡುತ್ತಾರೆ. ಹಿಂದಿ ಸಿನಿಮಾ ಸಿನಿಮಾಟೊಗ್ರಫಿಗೆ ಭಿನ್ನ ಭಾಷೆಯನ್ನೇ ಬರೆದುಕೊಟ್ಟವರು ವಿಕೆ ಮೂರ್ತಿ. ಗುರುದತ್ ಅವರೊಡನೆ ಸೇರಿ ಅವರು ಮಾಡಿದ ಪ್ರಯೋಗಗಳು ಇಂದಿಗೂ ಸಿನಿಮಾ ಶಾಲೆಯಲ್ಲಿ ಪಠ್ಯಗಳಾಗಿವೆ. ಕನ್ನಡಿಗರಾದ ವಿಕೆ ಮೂರ್ತಿ ಕೇವಲ ಒಂದು ಕನ್ನಡ ಸಿನಿಮಾಕ್ಕೆ ಕೆಲಸ ಮಾಡಿದ್ದಾರೆ ಅದುವೇ 1993ರಲ್ಲಿ ಬಿಡುಗಡೆ ಆದ ‘ಹೂವು ಹಣ್ಣು’. ಈ ಅದ್ಭುತ ಸಿನಿಮಾಟೊಗ್ರಾಫರ್ಗೆ 2008 ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಯ್ತು.
ಇದನ್ನೂ ಓದಿ:ಐದು ದಶಕದ ಅವಿರತ ಕಲಾಸೇವೆ: ಅನಂತ್ ನಾಗ್ ಅವರ ಸಿನಿ ಪಯಣದ ಪಕ್ಷಿ ನೋಟ
ಕನ್ನಡ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರಾಗಿರುವ ಅನಂತ್ ನಾಗ್ ಅವರಿಗೆ 2024ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 53 ವರ್ಷಗಳ ಕಾಲ ಅವರು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದು, ಈ ವರೆಗೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಅನಂತ್ ನಾಗ್ ಅವರು ಕನ್ನಡ ಮಾತ್ರವೇ ಅಲ್ಲದೆ ಹಿಂದಿ, ಮಲಯಾಳಂ, ತೆಲುಗು, ಮರಾಠಿ ಭಾಷೆಗಳ ಸಿನಿಮಾಗಳಲ್ಲೂ ನಟನೆ ಮಾಡಿದ್ದಾರೆ. ಅವರ ಅವಿರತ ಕಲಾಸೇವೆಯನ್ನು ಗುರುತಿಸಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೊಡಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Wed, 16 September 26