
ತೆಲುಗು ಚಿತ್ರರಂಗದಲ್ಲಿ (Tollywood) ಸಿನಿಮಾ ನಿರ್ಮಾಪಕ ಮತ್ತು ಪ್ರದರ್ಶಕರ ನಡುವೆ ವಿವಾದ ಭುಗಿಲೆದ್ದಿದ್ದು, ಇತ್ತೀಚೆಗಷ್ಟೆ ಸಭೆ ನಡೆಸಿ ಸಂಧಾನ ನಡೆಸಿದ್ದರೂ ಸಹ ಸಮಸ್ಯೆ ಮುಗಿದಿಲ್ಲ. ನಿರ್ಮಾಪಕರು ಹಾಗೂ ಪ್ರದರ್ಶಕರು ಪರಸ್ಪರ ಬಹಿರಂಗವಾಗಿಯೇ ಪರಸ್ಪರ ಹೇಳಿಕೆ-ಪ್ರತಿಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ತೆಲಂಗಾಣ ಪ್ರದರ್ಶಕರು ‘ಪೆದ್ದಿ’ ಸಿನಿಮಾವನ್ನು ಬಿಡುಗಡೆ ಮಾಡುವುದಿಲ್ಲವೆಂದು ‘ಬೆದರಿಕೆ’ ಸಹ ಹಾಕಿದ್ದಾರೆ. ಇದೆಲ್ಲದರ ನಡುವೆ ಕೆಲ ನಿರ್ಮಾಪಕರು ಆಂಧ್ರ ಪ್ರದೇಶ ಡಿಸಿಎಂ ಮತ್ತು ಸ್ಟಾರ್ ನಟ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಕೆಲ ಮನವಿಗಳನ್ನು ಸಲ್ಲಿಸಿದ್ದು, ಪವನ್ ಅವರು ನಿರ್ಮಾಪಕರಿಗೆ ಅಭಯ ನೀಡಿದ್ದಾರೆ ಎನ್ನಲಾಗುತ್ತಿದೆ.
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಕ್ಯಾಬಿನೆಟ್ ಮಂತ್ರಿಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ. ಆಡಳಿತಾತ್ಮಕ ಮಟ್ಟದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಅವರಿಗೆ ಇದೆ. ಇದೇ ಕಾರಣಕ್ಕೆ ಇದೀಗ ತೆಲುಗು ಚಲನಚಿತ್ರ ರಂಗದ ಕೆಲ ನಿರ್ಮಾಪಕರು ಅವರನ್ನು ಭೇಟಿ ಮಾಡಿದ್ದಾರೆ. ರಾಜಮಂಡ್ರಿ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ನಿರ್ಮಾಪಕರಾದ ನಾಗ ವಂಶಿ, ರವಿಶಂಕರ್, ಸಾಹು ಗಾರಪಾಟಿ ಮತ್ತು ಇತರರು ಭೇಟಿಯಾಗಿದ್ದರು. ವಿಶೇಷವಾಗಿ ಪ್ರಮುಖ ನಿರ್ಮಾಪಕ ಮತ್ತು ಹಲವು ಸಿನಿಮಾ ಮಂದಿರಗಳ ಮಾಲೀಕ ಆಗಿರುವ ಏಷಿಯನ್ ಸುನಿಲ್ ವಿರುದ್ಧ ಪವನ್ ಬಳಿ ದೂರುಗಳನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ.
ಪ್ರಸ್ತುತ ಚಲನಚಿತ್ರ ಪ್ರದರ್ಶಕರು ನಿರ್ಮಾಪಕರಿಂದ ಶೇಕಡಾವಾರು ಆಧಾರದ ಸಿನಿಮಾಗಳ ಲಾಭ ಹಂಚಿಕೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ವರದಿಗಳ ಪ್ರಕಾರ, ಈಗ ನಿರ್ಮಾಪಕರ ದೂರುಗಳನ್ನು ಪವನ್ ಕಲ್ಯಾಣ್ ಅವರು ಈ ಸಮಸ್ಯೆಯನ್ನು ಆಲಿಸಿ ತಮ್ಮ ಜೊತೆಯಲ್ಲೇ ಇದ್ದ ಆಂಧ್ರದ ಸಿನೆಮಾಟೋಗ್ರಫಿ ಸಚಿವ ಕಂದುಲ ದುರ್ಗೇಶ್ ಅವರ ಗಮನಕ್ಕೆ ತಂದರು. ಈ ಪರಿಸ್ಥಿತಿಯನ್ನು ಆದ್ಯತೆಯ ಮೇರೆಗೆ ನಿರ್ವಹಿಸಬೇಕು ಮತ್ತು ಆಗಾಗ್ಗೆ ತಮಗೆ ಇದರ ಪ್ರಗತಿಯ ಬಗ್ಗೆ ಅಪ್‌ಡೇಟ್ ನೀಡುತ್ತಿರಬೇಕು ಎಂದು ಸಂಬಂಧಪಟ್ಟ ತಂಡಕ್ಕೆ ಕಲ್ಯಾಣ್ ಅವರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ರಾಮ್ ಚರಣ್-ಪವನ್ ಕಲ್ಯಾಣ್ ಬಾಂಡಿಂಗ್ ನೋಡಿ ಹೊಗಳಿದ ಶಿವಣ್ಣ
ಪ್ರಸ್ತುತ ತೆಲುಗು ರಾಜ್ಯಗಳಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಡಿಗೆ ಆಧಾರದಲ್ಲಿ ಸಿನಿಮಾಗಳನ್ನು ಪ್ರದರ್ಶಿಸುತ್ತಿವೆ. ಆದರೆ ಇದೀಗ ಪ್ರದರ್ಶಕರು, ಇನ್ನು ಮುಂದೆ ಪರ್ಸೆಂಟೇಜ್ ಆಧಾರದಲ್ಲಿ ಸಿನಿಮಾಗಳನ್ನು ಪ್ರದರ್ಶಿಸುವುದಾಗಿ ಪಟ್ಟು ಹಿಡಿದಿದ್ದು, ನಿರ್ಮಾಪಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೆ ನಡೆದ ಸಂಧಾನ ಸಭೆಯಲ್ಲಿ ನಿರ್ಮಾಪಕರು ಲಾಭ ಹಂಚಿಕೆಗೆ ಒಪ್ಪಿಕೊಂಡಿದ್ದಾರೆ. ಆದರೆ ಪ್ರತಿ ಸೆಂಟರ್ಗಳಿಗೂ ಭಿನ್ನವಾದ ಪರ್ಸೆಂಟೇಜ್ ಮಾದರಿಗಳನ್ನು ನಿಗದಿ ಪಡಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದು, ಆದರೆ ಈಗ ಬಿಡುಗಡೆ ಆಗಲಿರುವ ‘ಪೆದ್ದಿ’ ಸಿನಿಮಾ ಅನ್ನು ಹಳೆಯ ಮಾದರಿಯಲ್ಲೇ ಪ್ರದರ್ಶಿಸಬೇಕು ಎಂದಿದ್ದರು. ಆದರೆ ಇದೀಗ ಕೆಲ ಸಿನಿಮಾ ಪ್ರದರ್ಶಕರು, ‘ಪೆದ್ದಿ’ ಸಿನಿಮಾ ಅನ್ನು ಲಾಭ ಹಂಚಿಕೆ ಆಧಾರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ