
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಖ್ಯಾತ ನಟ ದಳಪತಿ ವಿಜಯ್ ಅವರು ಪ್ರಸ್ತುತ ರಾಜ್ಯದ ಆಡಳಿತಾತ್ಮಕ ಕೆಲಸಗಳಲ್ಲಿ ಸಂಪೂರ್ಣವಾಗಿ ನಿರತರಾಗಿದ್ದಾರೆ. ರಾಜಕೀಯ ಪ್ರವೇಶದ ವೇಳೆಯೇ ಸಿನಿಮಾಗಳಿಂದ ನಿವೃತ್ತಿ ಘೋಷಿಸಿದ್ದ ವಿಜಯ್, ಮತ್ತೆ ಬಣ್ಣ ಹಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಅವರ ಅಭಿಮಾನಿಗಳಿಗೆ ಹಾಗೂ ತಮಿಳುನಾಡಿನ ಜನತೆಗೆ ಈಗೊಂದು ಅಚ್ಚರಿಯ ಸುದ್ದಿ ಹೊರಬಿದ್ದಿದ್ದು, ವಿಜಯ್ ಮತ್ತೆ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ! ಹೌದು, ಸಿಎಂ ವಿಜಯ್ ಅವರು ಮತ್ತೆ ನಟಿಸಲು ನಿರ್ಧರಿಸಿದ್ದಾರೆ. ಆದರೆ ಇದು ಯಾವುದೇ ವಾಣಿಜ್ಯ ಸಿನಿಮಾಗಾಗಿ ಅಲ್ಲ. ಬದಲಾಗಿ ತಮಿಳುನಾಡು ಸರ್ಕಾರ ಪ್ರಾಯೋಜಿತ ಜಾಹೀರಾತಿನಲ್ಲಿ.
ಸಾಮಾನ್ಯವಾಗಿ ಸರ್ಕಾರಗಳು ತಮ್ಮ ಜನಕಲ್ಯಾಣ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಬ್ರಾಂಡ್ ಅಂಬಾಸಿಡರ್‌ಗಳನ್ನು ಅಥವಾ ಪ್ರಸಿದ್ಧ ಸಿನಿಮಾ ನಟರನ್ನು ಬಳಸಿಕೊಳ್ಳುತ್ತವೆ. ಇದರಿಂದ ಸರ್ಕಾರಿ ಯೋಜನೆಗಳಿಗೆ ವ್ಯಾಪಕ ಪ್ರಚಾರ ಸಿಗುತ್ತದೆ. ಆದರೆ, ತಮಿಳುನಾಡಿನಲ್ಲಿ ಸ್ವತಃ ಮುಖ್ಯಮಂತ್ರಿ ವಿಜಯ್ ಅವರಿಗಿಂತ ದೊಡ್ಡ ಜನಪ್ರಿಯ ಮುಖ ಮತ್ತೊಂದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳ ಜಾಗೃತಿಗಾಗಿ ತಾವೇ ಜಾಹೀರಾತಿನಲ್ಲಿ ನಟಿಸಲು ವಿಜಯ್ ನಿರ್ಧರಿಸಿದ್ದಾರೆ.
ಸಾಮಾನ್ಯವಾಗಿ ಸರ್ಕಾರಿ ಜಾಹೀರಾತುಗಳಿಗೆ ಸಣ್ಣ ಮಟ್ಟದ ಬಜೆಟ್ ಇರುತ್ತದೆ. ಆದರೆ, ಈ ಜಾಹೀರಾತನ್ನು ಬೃಹತ್ ವೆಚ್ಚದಲ್ಲಿ, ಬಿಗ್ ಸ್ಕೇಲ್‌ನಲ್ಲಿ ಸಿನಿಮಾ ಮಾದರಿಯಲ್ಲೇ ನಿರ್ಮಿಸಲು ಯೋಜಿಸಲಾಗಿದೆ. ವಿಶೇಷವೆಂದರೆ, ಈ ಜಾಹೀರಾತನ್ನು ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ನಿರ್ದೇಶಿಸಲಿದ್ದಾರೆ ಎಂದು ವರದಿಯಾಗಿದೆ. ಅವರ ಜೊತೆಗೆ ಚಿತ್ರರಂಗದ ಅನುಭವಿ ತಾಂತ್ರಿಕ ವರ್ಗವೂ ಈ ಪ್ರಾಜೆಕ್ಟ್‌ನಲ್ಲಿ ಭಾಗಿಯಾಗಲಿದೆ.
ಇದನ್ನೂ ಓದಿ: ಅಪರೂಪದ ಅವಕಾಶ ಮಿಸ್ ಮಾಡಿಕೊಂಡ ದಳಪತಿ ವಿಜಯ್; ಕಾರಣವೇನು?
ಈ ಜಾಹೀರಾತಿನ ಚಿತ್ರೀಕರಣಕ್ಕಾಗಿ ಮುಖ್ಯಮಂತ್ರಿ ವಿಜಯ್ ಅವರು ಒಟ್ಟು ಎರಡು ದಿನಗಳ ಕಾಲ್‌ಶೀಟ್ ನೀಡಿದ್ದಾರೆ ಎನ್ನಲಾಗಿದೆ. ತಮಿಳುನಾಡಿನ 5 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಮುಗಿದ ತಕ್ಷಣವೇ ಈ ಜಾಹೀರಾತಿನ ಶೂಟಿಂಗ್ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಚಿತ್ರರಂಗಕ್ಕೆ ವಿದಾಯ ಹೇಳಿದ್ದ ತಮ್ಮ ನೆಚ್ಚಿನ ನಟ ಮತ್ತೆ ಬಣ್ಣ ಹಚ್ಚುವುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.