
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಸ್ಪರ್ಧಿಗಳ ಆಟವನ್ನು ನೋಡಿ ಬಿಗ್ ಬಾಸ್ ಹಾಗೂ ವೀಕ್ಷಕರು ಇಬ್ಬರಿಗೂ ಅಚ್ಚರಿ ಆಗುತ್ತಿದೆ. ಈ ಆಟವನ್ನು ನೋಡಿ ನಗಬೇಕೋ ಅಥವಾ ಅಳಬೇಕೋ ಎಂಬುದು ವೀಕ್ಷಕರಿಗೆ ಅರ್ಥವಾಗುತ್ತಿಲ್ಲ. ಆ ರೀತಿಯಲ್ಲಿ ಇವರ ಆಟ ಇದೆ. ಟಾಸ್ಕ್ ವೇಳೆ ಸ್ಪರ್ಧಿಗಳು ನಡೆದುಕೊಳ್ಳುತ್ತಿರುವ ರೀತಿ ನೋಡಿ ಬಿಗ್ ಬಾಸ್ ತಾಳ್ಮೆ ಕಳೆದುಕೊಂಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.
‘ಬಿಗ್ ಬಾಸ್’ ಮನೆಗೆ ಬರೋ ಎಲ್ಲಾ ಸ್ಪರ್ಧಿಗಳು ಒಂದೇ ರೀತಿ ಇರೋದಿಲ್ಲ. ಕೆಲವರು ಬಿಗ್ ಬಾಸ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದರೆ, ಇನ್ನೂ ಕೆಲವು ಸ್ಪರ್ಧಿಗಳು ನಿಯಮ ಮೀರಿ ಆಡುತ್ತಾರೆ. ಆದರೆ, ಈ ಬಾರಿ ಬಂದ ಎಲ್ಲಾ ಸ್ಪರ್ಧಿಗಳಿಗೆ ಬಿಗ್ ಬಾಸ್ ಮೇಲೆ ಯಾವುದೇ ಗೌರವ ಇಲ್ಲ. ನಿಯಮಗಳನ್ನು ಲೆಕ್ಕಿಸದೆ ಇವರು ಆಟ ಆಡುತ್ತಿದ್ದಾರೆ. ಅಕ್ಟೋಬರ್ 7ರ ಎಪಿಸೋಡ್ನಲ್ಲೂ ಹೀಗೆಯೇ ಆಗಿದ್ದು, ಬಿಗ್ ಬಾಸ್ ತಾಳ್ಮೆ ಕಳೆದುಕೊಂಡಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್ ನೀಡಲಾಗಿತ್ತು. ಇದರ ಅನುಸಾರ ಒಂದಷ್ಟು ಮಂದಿ, ಗಂಧರ್ವರಾದರೆ, ಇನ್ನೂ ಕೆಲವರು ರಾಕ್ಷಸರಾಗಿದ್ದರು. ರಾಕ್ಷಸ ತಂಡದವರು ಅಟ್ಟಹಾಸ ಮೆರೆಯಬೇಕು. ಗಂಧರ್ವರು ಅವರು ಹೇಳಿದಂತೆ ಕೇಳಬೇಕು. ಆಗ ನೀಡಿದ ಟಾಸ್ಕ್ ಅಲ್ಲಿ ಮೊದಲು ಸೌಂದರ್ಯಾ ಅವರು ಸ್ವಿಮಿಂಗ್ಪೂಲ್ಗೆ ಹಾರಿದರು. ಆಗ ಅವರು ಮೈಕ್ ಧರಿಸಿಯೇ ಇದ್ದರು.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ 13: ರಾಕ್ಷಸನಾಗಿ ಬಾಯಿ ಬಂದಂತೆ ಮಾತನಾಡುತ್ತಿರುವ ಮಂಜ
ನೀರಿಗೆ ಹಾರಿದ ಬಳಿಕ ಅವರು ಮೈಕ್ ತೆಗೆದು ಇಟ್ಟರು. ಆ ಬಳಿಕ ಪ್ರಶಾಂತ್ ಅವರು ಕೂಡ ಮೈಕ್ ಧರಿಸಿಯೇ ನೀರಿಗೆ ಬಿದ್ದರು. ಇದರಿಂದ ಬಿಗ್ ಬಾಸ್ ತಾಳ್ಮೆ ಕಳೆದುಕೊಂಡರು. ‘ನಿಮ್ಮ ಮೈಕ್ ಬಗ್ಗೆ ಗಮನ ಇರಲಿ’ ಎಂದು ಕಠೋರ ಧ್ವನಿಯಲ್ಲಿ ಎಚ್ಚರಿಕೆ ನೀಡಿದರು. ಆ ಬಳಿಕ ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪ ಹೊರಿಸಲು ಪ್ರಾರಂಭಿಸಿದರು. ಪ್ರಶಾಂತ್ ತಾವು ಬೀಳಲು ಧನುಷ್ ಕಾರಣ ಎಂದರೆ, ಧನುಷ್ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:36 am, Thu, 8 October 26