
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ದಿನಕ್ಕೊಂದು ಹೊಸ ದ್ವೇಷ, ವಿವಾದ ಮತ್ತು ಮನಸ್ತಾಪಗಳು ಹುಟ್ಟಿಕೊಳ್ಳುತ್ತಿವೆ. ಇದೀಗ ಬಿಗ್ ಬಾಸ್ ಮನೆಯಿಂದ ಹೊರನಡೆಯುವ ಇಚ್ಛೆಯನ್ನು ವ್ಯಕ್ತಪಡಿಸುವ ಮೂಲಕ ನಟ ಗಗನ್ ಚಿನ್ನಪ್ಪ ಎಲ್ಲರಿಗೂ ದೊಡ್ಡ ಶಾಕ್ ನೀಡಿದ್ದಾರೆ. ಈ ವಿಷಯ ಯಾವುದೋ ಊಹಾಪೋಹ ಅಥವಾ ಕಲ್ಪಿತ ಕಥೆಯಲ್ಲ. ಸ್ವತಃ ಗಗನ್ ಅವರೇ ತಮ್ಮ ಸಹ-ಸ್ಪರ್ಧಿ ತಾಂಡವ್ ರಾಮ್ ಬಳಿ ಈ ನಿರ್ಧಾರವನ್ನು ಹಂಚಿಕೊಂಡಿದ್ದು, ಬಿಗ್ ಬಾಸ್ ಅಭಿಮಾನಿಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ನಡೆದ ‘ಗಂಧರ್ವರು ಮತ್ತು ರಾಕ್ಷಸರು’ ಟಾಸ್ಕ್ ಆಟದ ವೇಳೆ ವಾತಾವರಣ ತೀರ ತಾರಕಕ್ಕೇರಿತ್ತು. ಈ ಸಂದರ್ಭದಲ್ಲಿ ಸ್ಪರ್ಧಿ ಗಾನವಿ ಗೌಡ ಅವರು ಗಗನ್ ಚಿನ್ನಪ್ಪ ಅವರಿಗೆ ‘ಕುನ್ನಿ’ ಎಂಬ ಪದವನ್ನು ಬಳಸಿ ನಿಂದಿಸಿದ್ದರು. ಈ ಪದ ಬಳಕೆ ಗಗನ್ ಅವರಿಗೆ ತೀವ್ರ ಬೇಸರ ಮತ್ತು ಸಿಟ್ಟು ತರಿಸಿದೆ. ‘ನನಗೆ ನನ್ನ ಆತ್ಮಗೌರವಕ್ಕಿಂತ ದೊಡ್ಡದು ಯಾವುದೂ ಇಲ್ಲ’ ಎಂದು ಗಗನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಸ್ಕ್ ಮುಗಿದ ಬಳಿಕ ತೀವ್ರ ಭಾವುಕರಾದ ಗಗನ್, ತಮ್ಮ ಆಪ್ತ ಸ್ನೇಹಿತ ತಾಂಡವ್ ರಾಮ್ ಜೊತೆ ಮನದಾಳದ ನೋವನ್ನು ಹಂಚಿಕೊಂಡಿದ್ದಾರಂತೆ. ನಂತರ ಈ ವಿಷಯವನ್ನು ತಾಂಡವ್ ಇತರರ ಮುಂದೆ ರಿವೀಲ್ ಮಾಡಿದ್ದಾರೆ. ‘ಗಗನ್ ಮನಸ್ಸಿಗೆ ಆ ಕುನ್ನಿ ಪದ ತುಂಬಾ ಹರ್ಟ್ ಆಗಿದೆ. ನನ್ನ ಸೆಲ್ಫ್ ರೆಸ್ಪೆಕ್ಟ್ ಹಾಳಾಗುತ್ತಿದೆ. ಈ ರೀತಿ ಅಸಹ್ಯವಾಗಿ ಆಟ ಆಡಲು ನನಗೆ ಸಾಧ್ಯವಿಲ್ಲ. ಬೇಕಿದ್ದರೆ ನಾನು ಈ ಶೋ ಬಿಟ್ಟು ಹೊರಡುತ್ತೇನೆ’ ಎಂದು ಗಗನ್ ಹೇಳಿರುವುದಾಗಿ ತಾಂಡವ್ ರಾಮ್ ತಿಳಿಸಿದ್ದಾರೆ. ‘ಈ ಟಾಸ್ಕ್‌ನಿಂದ ಅವನು ತುಂಬಾ ಲೋ ಆಗಿದ್ದಾನೆ’ ಎಂದು ತಾಂಡವ್ ಹೇಳಿದರು.
ಇದನ್ನೂ ಓದಿ: ಟಾಸ್ಕ್ ನೆಪದಲ್ಲಿ ಇಡೀ ಬಿಗ್ ಬಾಸ್ ಮನೆಯನ್ನು ಕೊಚ್ಚೆಗುಂಡಿ ಮಾಡಿದ ಸ್ಪರ್ಧಿಗಳು
ಗಗನ್ ಚಿನ್ನಪ್ಪ ನಿಜವಾಗಿಯೂ ಶೋ ತೊರೆಯುತ್ತಾರಾ ಅಥವಾ ಈ ವಾರಾಂತ್ಯದ ‘ಕಿಚ್ಚನ ಪಂಚಾಯಿತಿ’ಯಲ್ಲಿ ಸುದೀಪ್ ಅವರು ಈ ವಿಚಾರವನ್ನು ಬಗೆಹರಿಸಿ ಗಗನ್‌ಗೆ ಧೈರ್ಯ ತುಂಬುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.