ಫ್ಯಾಮಿಲಿ ವೀಕ್​​​ ಸ್ಪೆಷಲ್; ತೆಲುಗು ಬಿಗ್ ಬಾಸ್ ವೇದಿಕೆಯಲ್ಲಿ ಕನ್ನಡದ ಕಂಪು

ಬಿಗ್ ಬಾಸ್ ತೆಲುಗು ಸೀಸನ್ 10ರ ಸ್ಪರ್ಧಿಯಾಗಿರುವ ಕನ್ನಡದ ನಟ ಮುಕೇಶ್ ಗೌಡ ಅವರನ್ನು ಭೇಟಿಯಾಗಲು ಫ್ಯಾಮಿಲಿ ವೀಕ್‌ನಲ್ಲಿ ಅವರ ತಾಯಿ ಮನೆಯೊಳಗೆ ಆಗಮಿಸಿದ್ದರು. ಈ ವೇಳೆ ತೆಲುಗು ವೇದಿಕೆಯಲ್ಲೇ ಶುದ್ಧ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡಿಗರ ಮನಗೆದ್ದಿದ್ದು, ಈ ಭಾವುಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಫ್ಯಾಮಿಲಿ ವೀಕ್​​​ ಸ್ಪೆಷಲ್; ತೆಲುಗು ಬಿಗ್ ಬಾಸ್ ವೇದಿಕೆಯಲ್ಲಿ ಕನ್ನಡದ ಕಂಪು
ಮುಕೇಶ್

Updated on: Nov 14, 2026 | 2:26 PM

ಮುಖ್ಯಾಂಶಗಳು

  • ತೆಲುಗು ಬಿಗ್ ಬಾಸ್ ವೇದಿಕೆಯಲ್ಲಿ ಕನ್ನಡದ ಕಂಪು
  • ಕನ್ನಡಿಗರಿಗೆ ಹೆಮ್ಮೆಯ ಕ್ಷಣ
  • ಫ್ಯಾಮಿಲಿ ವೀಕ್‌ನಲ್ಲಿ ಶುದ್ಧ ಕನ್ನಡದಲ್ಲೇ ಮಾತನಾಡಿದ ಮುಕೇಶ್ ತಾಯಿ

ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಬೇರೆ ಭಾಷೆಯ ಸ್ಪರ್ಧಿಗಳನ್ನು ಕರೆತರುವುದು ತೀರಾ ಕಡಿಮೆ. ಒಂದು ವೇಳೆ ಪರಭಾಷೆಯವರನ್ನು ಕರೆತಂದರೂ ಮನೆಯೊಳಗೆ ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡಬೇಕು ಎಂಬ ಕಠಿಣ ಷರತ್ತು ವಿಧಿಸಲಾಗುತ್ತದೆ. ಈ ನಿಯಮ ಕೇವಲ ಸ್ಪರ್ಧಿಗಳಿಗೆ ಮಾತ್ರವಲ್ಲದೆ, ‘ಫ್ಯಾಮಿಲಿ ವೀಕ್’ ಸಂದರ್ಭದಲ್ಲಿ ಮನೆಯೊಳಗೆ ಬರುವ ಅವರ ಕುಟುಂಬಸ್ಥರಿಗೂ ಅನ್ವಯವಾಗುತ್ತದೆ. ಆದರೆ, ಪರಭಾಷೆಯ ಬಿಗ್ ಬಾಸ್ ಕಾರ್ಯಕ್ರಮಗಳಲ್ಲಿ ಈ ಭಾಷಾ ನಿಯಮ ಅಷ್ಟು ಕಠಿಣವಾಗಿ ಜಾರಿಯಲ್ಲಿ ಇಲ್ಲದಿರುವುದು ವಿಶೇಷ. ಇದಕ್ಕೆ ಪೂರಕವೆಂಬಂತೆ, ಇದೀಗ ತೆಲುಗು ಬಿಗ್ ಬಾಸ್ ವೇದಿಕೆಯಲ್ಲಿ ಕನ್ನಡದ ಕಂಪು ಪಸರಿಸಿದ್ದು, ಕರ್ನಾಟಕದವರಿಗೆ ಹೆಮ್ಮೆ ತಂದಿದೆ.

ಕನ್ನಡದಲ್ಲಿ ‘ತೀರ್ಥರೂಪ ತಂದೆಯವರಿಗೆ’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದ ಮೈಸೂರು ಮೂಲದ ನಟ ಮುಕೇಶ್ ಗೌಡ, ಈ ಬಾರಿಯ ‘ಬಿಗ್ ಬಾಸ್ ತೆಲುಗು ಸೀಸನ್ 10’ರ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶಿಸಿದ್ದಾರೆ. ತೆಲುಗು ಕಿರುತೆರೆಯಲ್ಲಿ 2020ರಿಂದ 2024ರ ಡಿಸೆಂಬರ್‌ವರೆಗೆ ಪ್ರಸಾರ ಕಂಡು ಭಾರಿ ಜನಪ್ರಿಯತೆ ಗಳಿಸಿದ್ದ ‘ಗುಪ್ಪೆಡಂತ ಮನಸು’ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ಮುಕೇಶ್, ತೆಲುಗು ಪ್ರೇಕ್ಷಕರ ಮನೆಮಾತಾಗಿದ್ದರು. ಇದೇ ಜನಪ್ರಿಯತೆ ಅವರಿಗೆ ಬಿಗ್ ಬಾಸ್ ಮನೆಯ ಬಾಗಿಲು ತೆರೆಯಲು ಕಾರಣವಾಗಿದೆ.

Loading...

ಇತ್ತೀಚೆಗೆ ತೆಲುಗು ಬಿಗ್ ಬಾಸ್ ಮನೆಯಲ್ಲಿ ನಡೆದ ‘ಫ್ಯಾಮಿಲಿ ವೀಕ್’ ಸಂಚಿಕೆಯಲ್ಲಿ ಮುಕೇಶ್ ಗೌಡ ಅವರ ತಾಯಿ ಮನೆಯೊಳಗೆ ಆಗಮಿಸಿದ್ದರು. ಬಹಳ ದಿನಗಳ ನಂತರ ತಾಯಿಯನ್ನು ಕಂಡು ಮುಕೇಶ್ ಭಾವುಕರಾದರು. ಈ ವೇಳೆ ತೆಲುಗು ವಾಹಿನಿಯ ವೇದಿಕೆಯಾಗಿದ್ದರೂ, ಮುಕೇಶ್ ಅವರ ತಾಯಿ ಯಾವುದೇ ಹಿಂಜರಿಕೆಯಿಲ್ಲದೆ ಶುದ್ಧ ಕನ್ನಡದಲ್ಲೇ ತಮ್ಮ ಮಗನೊಂದಿಗೆ ಮಾತನಾಡಿ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ; ಶಪಥ ಮಾಡಿದ ಗಾನವಿ

ತೆಲುಗು ಬಿಗ್ ಬಾಸ್​ನಲ್ಲಿ ಕನ್ನಡಿಗ ಸ್ಪರ್ಧಿಯೊಬ್ಬರ ತಾಯಿ ಮನೆಯೊಳಗೆ ಬಂದು ಮಾತೃಭಾಷೆ ಕನ್ನಡದಲ್ಲೇ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪರಭಾಷೆಯ ದೊಡ್ಡ ವೇದಿಕೆಯಲ್ಲಿ ಕನ್ನಡ ಮೊಳಗಿರುವುದಕ್ಕೆ ಕನ್ನಡಿಗರು ಹಾಗೂ ಮುಕೇಶ್ ಗೌಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us