
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಗ್ನಿಸಾಕ್ಷಿ’ ಯಶಸ್ವಿಯಾಗಿ 100 ಸಂಚಿಕೆಗಳನ್ನು ಪೂರೈಸಿದ್ದು, ಈ ಸಂತಸದ ಕ್ಷಣವನ್ನು ತಂಡ ಹೊಸಪೇಟೆಯ ಜನತೆಯೊಂದಿಗೆ ವಿಜೃಂಭಣೆಯಿಂದ ಆಚರಿಸಿದೆ. ನಗರದಲ್ಲಿ ಆಯೋಜಿಸಲಾಗಿದ್ದ ‘ಅಗ್ನಿಸಾಕ್ಷಿ ಸೀರಿಯಲ್ ಸಂಭ್ರಮ’ ಕಾರ್ಯಕ್ರಮಕ್ಕೆ ಸಾವಿರಕ್ಕೂ ಅಧಿಕ ಅಭಿಮಾನಿಗಳು ಸಾಕ್ಷಿಯಾಗಿ, ನೆಚ್ಚಿನ ಕಲಾವಿದರನ್ನು ಕಣ್ಣುಂಬಿಕೊಂಡರು.
ಕಾರ್ಯಕ್ರಮ ಸಭಾಂಗಣಕ್ಕೆ ತಲುಪುವ ಮುನ್ನ ಧಾರಾವಾಹಿಯ ಮುಖ್ಯ ಪಾತ್ರಧಾರಿಗಳಾದ ಅಗ್ನಿ, ಸಾಕ್ಷಿ ಹಾಗೂ ಅದಿತಿ ಜೋಡಿ ನಟ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಬಳಿಕ ವೇದಿಕೆಗೆ ಆಗಮಿಸಿದ ತಾರಾಗಣಕ್ಕೆ ಹೊಸಪೇಟೆಯ ಜನತೆಯಿಂದ ಅದ್ಧೂರಿ ಸ್ವಾಗತ ದೊರೆಯಿತು. ಪ್ರೇಕ್ಷಕರ ಸಮ್ಮುಖದಲ್ಲೇ ಕೇಕ್ ಕತ್ತರಿಸಿದ ತಾರೆಯರು, ಧಾರಾವಾಹಿಗೆ ನಿರಂತರವಾಗಿ ನೀಡುತ್ತಿರುವ ಬೆಂಬಲ ಮತ್ತು ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.
ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ‘ಅಗ್ನಿಸಾಕ್ಷಿ’ಯ 2 ಗಂಟೆಗಳ ಸುದೀರ್ಘ ವಿಶೇಷ ಸಂಚಿಕೆಯನ್ನು ಅಭಿಮಾನಿಗಳು ಮತ್ತು ಕಲಾವಿದರು ಒಂದೇ ವೇದಿಕೆಯಲ್ಲಿ ಕುಳಿತು ವೀಕ್ಷಿಸಿದ್ದು. ತೆರೆಯ ಮೇಲಿನ ನೆಚ್ಚಿನ ಪಾತ್ರಧಾರಿಗಳು ತಮ್ಮ ಪಕ್ಕದಲ್ಲೇ ಕುಳಿತು ಸೀರಿಯಲ್ ನೋಡಿದ ಅನುಭವ ಪ್ರೇಕ್ಷಕರಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿತು.
ಇದನ್ನೂ ಓದಿ: 100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಕಲರ್ಸ್ ಕನ್ನಡದ ‘ಅಗ್ನಿಸಾಕ್ಷಿ’ ಧಾರಾವಾಹಿ
ಸಂವಾದ, ಮನರಂಜನಾ ಆಟಗಳು ಹಾಗೂ ಪ್ರೇಕ್ಷಕರ ಪ್ರಶ್ನೆಗಳಿಗೆ ನೇರ ಉತ್ತರ ನೀಡುವ ಮೂಲಕ ತಾರೆಯರು ಅಭಿಮಾನಿಗಳೊಂದಿಗೆ ಮುಕ್ತವಾಗಿ ಬೆರೆತರು. ಒಟ್ಟಿನಲ್ಲಿ ತಾರೆಯರ ಸಾನ್ನಿಧ್ಯ, ಪ್ರೇಕ್ಷಕರ ಉತ್ಸಾಹ ಹಾಗೂ ಸಾಮೂಹಿಕ ವೀಕ್ಷಣೆಯೊಂದಿಗೆ ಹೊಸಪೇಟೆಯಲ್ಲಿ ನಡೆದ ‘ಅಗ್ನಿಸಾಕ್ಷಿ ಸೀರಿಯಲ್ ಸಂಭ್ರಮ’ ಅತ್ಯಂತ ಸ್ಮರಣೀಯ ಕ್ಷಣವಾಗಿ ಮೂಡಿಬಂತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:00 am, Wed, 7 October 26