
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ಭಾನುವಾರ ಎಲಿಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸ್ಪರ್ಧಿ ಲಿಖಿತ್ ಅವರು ದೊಡ್ಮನೆಯಿಂದ ಹೊರಬಿದ್ದಿದ್ದಾರೆ. ಆರಂಭದಿಂದಲೂ ತಮ್ಮದೇ ಶೈಲಿಯ ಆಟದಿಂದ ಗಮನಸೆಳೆಯಲು ಯತ್ನಿಸಿದ್ದ ಲಿಖಿತ್, ವೀಕ್ಷಕರ ವೋಟಿಂಗ್ ಲೆಕ್ಕಾಚಾರದಲ್ಲಿ ಹಿನ್ನಡೆ ಅನುಭವಿಸಿ ತಮ್ಮ ಬಿಗ್ ಬಾಸ್ ಪಯಣವನ್ನು ಮುಗಿಸಿದ್ದಾರೆ. ಈ ಮೂಲಕ ಅಗ್ನಿಪರೀಕ್ಷೆಯಿಂದ ಬಂದವರ ಪೈಕಿ ಮೊದಲು ಹೊರ ಹೋದವರು ಇವರಾಗಿದ್ದಾರೆ.
ಕಳೆದ ವಾರದ ನಾಮಿನೇಷನ್ ಪಟ್ಟಿಯಲ್ಲಿದ್ದ ಕಿರಣ್, ಧನುಷ್, ಮಂಜು, ಸಂಗೀತಾ, ಯಶಸ್ ಮತ್ತು ಲಿಖಿತ್ ಅವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ, ವೀಕ್ಷಕರಿಂದ ಬಂದ ಅಂತಿಮ ಮತಗಳ ಆಧಾರದ ಮೇಲೆ ಲಿಖಿತ್ ಅವರು ಕನಿಷ್ಠ ವೋಟ್ ಪಡೆದ ಕಾರಣಕ್ಕೆ ಮನೆಯಿಂದ ಎಲಿಮಿನೇಟ್ ಆಗಬೇಕಾಯಿತು.
ಲಿಖಿತ್ ಅವರ ಈ ಅಕಾಲಿಕ ನಿರ್ಗಮನಕ್ಕೆ ಮನೆಯಲ್ಲಿದ್ದ ಅವರ ಸಿಟ್ಟಿನ ಸ್ವಭಾವವೇ ಮುಖ್ಯ ಕಾರಣ ಎನ್ನಲಾಗಿದೆ. ಸಣ್ಣಪುಟ್ಟ ವಿಚಾರಗಳಿಗೂ ಬಿಗ್ ಬಾಸ್ ಸದಸ್ಯರೊಂದಿಗೆ ಪದೇ ಪದೇ ಕಿರಿಕ್ ಮಾಡಿಕೊಳ್ಳುತ್ತಿದ್ದದ್ದು ಮತ್ತು ವೀಕ್ಷಕರಿಗೆ ಕಿರಿಕಿರಿ ಉಂಟುಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದದ್ದು ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು.
ಎಲಿಮಿನೇಟ್ ಆದ ಬಳಿಕ ವೇದಿಕೆ ಮೇಲೆ ಸುದೀಪ್ ಜೊತೆ ಮಾತನಾಡಿದ ಲಿಖಿತ್, ತಮ್ಮ ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ‘ನನ್ನ ಆ್ಯಂಗರ್ ಇಶ್ಯೂ ನನಗೆ ಮುಳುವಾಯ್ತು ಅನಿಸುತ್ತೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಪ್ರೇಕ್ಷಕರನ್ನು ಹಾಗೂ ಮನೆಯವರನ್ನು ನಗಿಸುವ ಸಾಕಷ್ಟು ಅವಕಾಶಗಳಿದ್ದವು. ಆದರೆ ಕೋಪದ ಕೈಗೆ ಬುದ್ಧಿ ಕೊಟ್ಟು ಆ ಒಳ್ಳೆಯ ಅವಕಾಶವನ್ನು ಮಿಸ್ ಮಾಡಿಕೊಂಡೆ. ಈ ವಾರ ನಾನೇ ಹೋಗ್ತೀನಿ ಅಂತ ಗೊತ್ತಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಗ್ಬಾಸ್ ಮನೆಗೆ ನುಗ್ಗಿದ ಕಮಾಂಡೋಗಳು: ಹೊರಗೆಳೆದುಕೊಂಡು ಹೋಗಿದ್ದು ಯಾರನ್ನು?
ಒಟ್ಟಿನಲ್ಲಿ ಬಿಗ್ ಬಾಸ್‌ನಂತಹ ದೊಡ್ಡ ವೇದಿಕೆಯಲ್ಲಿ ಸಮಯಕ್ಕೆ ತಕ್ಕಂತೆ ತಾಳ್ಮೆ ಕಾಯ್ದುಕೊಳ್ಳುವುದು ಎಷ್ಟು ಮುಖ್ಯ ಎಂಬುದಕ್ಕೆ ಲಿಖಿತ್ ಅವರ ಎಲಿಮಿನೇಷನ್ ಉದಾಹರಣೆಯಾಗಿದೆ. ಕೋಪವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಆಡಿದ್ದರೆ ಅವರು ಇನ್ನು ಕೆಲವು ವಾರಗಳ ಕಾಲ ಮನೆಯಲ್ಲಿ ಮುಂದುವರಿಯುವ ಸಾಧ್ಯತೆಯಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.