
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಪವರ್ ರೀಲೋಡೆಡ್‘ ಈಗ ಹೈವೋಲ್ಟೇಜ್ ಡ್ರಾಮಾ ಹಾಗೂ ಗಂಭೀರ ವಿವಾದದಿಂದಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬೆಟ್ಟದ ಮೇಲಿನ ಸಾಹಸ ಟಾಸ್ಕ್ ವೇಳೆ ಸ್ಪರ್ಧಿ ಬಿಬಿ ಹಜೀರಾ, ಸಹ ಸ್ಪರ್ಧಿ ಫರೀನ್ ಮೇಲೆ ಕೈ ಮಾಡಿರುವ ಘಟನೆ ಶೋನಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದು, ಬಿಬಿ ಮೇಲೆ ಈಗ ಶೋನಿಂದ ಎಲಿಮಿನೇಷನ್ ತೂಗುಗತ್ತಿ ನೇತಾಡುತ್ತಿದೆ.
ಬೆಟ್ಟ ಹತ್ತಿ ತುದಿಯಲ್ಲಿರುವ ಬಾವುಟವನ್ನು ಮೊದಲು ಯಾರು ಎತ್ತುತ್ತಾರೋ ಅವರು ವಿಜೇತರು ಎಂಬ ಕಠಿಣ ಟಾಸ್ಕ್ ಅನ್ನು ಫರೀನ್ ಮತ್ತು ಬಿಬಿಗೆ ನೀಡಲಾಗಿತ್ತು. ಈ ಪೈಪೋಟಿಯಲ್ಲಿ ಫರೀನ್ ಮೊದಲು ಬಾವುಟ ಹಿಡಿದು ಸಂಭ್ರಮಿಸಿದರು. ಆದರೆ ಬಾವುಟ ಸಿಗದ ಕೋಪದಲ್ಲಿದ್ದ ಬಿಬಿ, ‘ನನಗೆ ಸಿಕ್ಕಿಲ್ಲ ಅಂದ್ರೂ ಪರವಾಗಿಲ್ಲ’ ಎಂದು ವಾದಕ್ಕಿಳಿದರು. ಈ ವೇಳೆ ಮಾತಿಗೆ ಮಾತು ಬೆಳೆದು ತೀವ್ರ ವಾಗ್ವಾದ ನಡೆಯುತ್ತಿದ್ದಾಗ, ತಾಳ್ಮೆ ಕಳೆದುಕೊಂಡ ಬಿಬಿ ಏಕಾಏಕಿ ಫರೀನ್ ಅವರನ್ನು ತಳ್ಳಿ, ಕೆನ್ನೆಗೆ ಹೊಡೆದಿದ್ದಾರೆ.
ಕಣ್ಣೆದುರೇ ನಡೆದ ಈ ಹಲ್ಲೆ ಕಂಡು ನಿರೂಪಕ ಅಕುಲ್ ಬಾಲಾಜಿ ತೀವ್ರ ಆಕ್ರೋಶಗೊಂಡರು. ಬೆಟ್ಟದ ತುದಿಯಲ್ಲಿದ್ದ ಅಪಾಯಕಾರಿ ಸ್ಥಳದಲ್ಲಿ ಇಂತಹ ವರ್ತನೆ ತೋರಿದ್ದಕ್ಕೆ ಬಿಬಿಯನ್ನು ತರಾಟೆಗೆ ತೆಗೆದುಕೊಂಡ ಅಕುಲ್, ‘ಒಂದು ಕೊಡಬೇಕು ನಿನಗೆ! ಬಿದ್ದಿದ್ರೆ ಅಲ್ಲಿಂದ ನೋಡು… ಶಟ್ ಅಪ್’ ಎಂದು ಗುಡುಗಿದರು. ಅಕುಲ್ ಅವರ ಕೋಪಕ್ಕೆ ಬಿಬಿ ಬೆಚ್ಚಿಬಿದ್ದಿದ್ದಾರೆ.
ಈ ಘಟನೆಯ ಬಳಿಕ ವಾರದ ಪಂಚಾಯ್ತಿಯಲ್ಲಿ ಬಿಬಿ ವರ್ತನೆಯ ವಿರುದ್ಧ ಇಡೀ ಮನೆ ಒಂದಾಗಿದೆ. ‘ಉಪ್ಪು ಖಾರ ತಿಂದ್ರೆ ಮನುಷ್ಯತ್ವ ಅನ್ನೋದು ಇರಬೇಕು, ಹೊಡೆದಾದ ಮೇಲೆ ಆ ಹುಡುಗಿಯನ್ನು ಕಳಿಸಬೇಕು’ ಎಂದು ಅಕುಲ್ ಬಾಲಾಜಿ ಕಠಿಣ ನಿಲುವು ತಾಳಿದ್ದಾರೆ. ಅತ್ತ ಸಹ ಸ್ಪರ್ಧಿಗಳು ಕೂಡ ಬಿಬಿ ವಿರುದ್ಧ ಸಿಡಿದೆದ್ದಿದ್ದು, ‘ಅಕುಲ್ ಸರ್ ಹತ್ತಿರ ಆ ತರ ಮಾತಾಡೋಕೆ ನಿನಗೆ ಅರ್ಹತೆ ಇಲ್ಲ, ಶಟ್ ಯುವರ್ ಮೌತ್. ಯಾರನ್ನೂ ಮುಟ್ಟೋಕೆ ನಿನಗೆ ರೈಟ್ಸ್ ಇಲ್ಲ, ನೀನು ಮುಟ್ಟಿದ್ದೇ ತಪ್ಪು’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಫರೀನ್ ಕೂಡ ‘ನಾನು ಬಂದು ನಿನಗೆ ಎರಡು ಬಿಟ್ರೆ ನಿಮ್ಮ ಅಪ್ಪ-ಅಮ್ಮ ಸುಮ್ಮನಿರ್ತಾರಾ?’ ಎಂದು ಕಣ್ಣೀರಿಡುತ್ತಲೇ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಜೀ ಕನ್ನಡದಲ್ಲಿ ನವೆಂಬರ್ 16ರಿಂದ ‘ಗೌರಿಪುತ್ರ’ ಧಾರಾವಾಹಿ ಪ್ರಸಾರ
ಒಟ್ಟಿನಲ್ಲಿ, ರಿಯಾಲಿಟಿ ಶೋ ನಿಯಮಗಳನ್ನು ಉಲ್ಲಂಘಿಸಿ ಸಹ ಸ್ಪರ್ಧಿ ಮೇಲೆ ಕೈ ಮಾಡಿರುವ ಬಿಬಿ ವಿರುದ್ಧ ವೀಕ್ಷಕರು ಹಾಗೂ ಸ್ಪರ್ಧಿಗಳು ಕಿಡಿಕಾರುತ್ತಿದ್ದಾರೆ. ರಾತ್ರಿ 9.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ಬಿಬಿಗೆ ಯಾವ ರೀತಿಯ ಶಿಕ್ಷೆ ಸಿಗಲಿದೆ ಅಥವಾ ಶೋನಿಂದಲೇ ಗೇಟ್ಪಾಸ್ ಸಿಗಲಿದೆಯೇ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.