ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕ್ಲಾಸಿಕ್ ಸಿನಿಮಾಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ಅವರ ಜೊತೆ ಕೆಲಸ ಮಾಡಬೇಕು ಎಂದು ಅನೇಕ ನಟ-ನಟಿಯರು, ತಂತ್ರಜ್ಞರು ಕಾದಿರುತ್ತಾರೆ. ಆದರೆ ‘ಹೆಬ್ಬುಲಿ’ ಖ್ಯಾತಿಯ ನಟಿ ಅಮಲಾ ಪೌಲ್ (Amala Paul) ಅವರು ಇಂಥ ಅವಕಾಶವನ್ನು ಕೈ ಚೆಲ್ಲಿದ್ದಾರೆ. ಅದು ಕೂಡ ಎರಡು ಬಾರಿ! ಹೌದು, ಮಣಿರತ್ನಂ ನಿರ್ದೇಶನ ಮಾಡುತ್ತಿರುವ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಸಿನಿಮಾದಲ್ಲಿ ನಟಿಸುವಂತೆ ಅಮಲಾ ಪೌಲ್ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಆ ಚಿತ್ರದಲ್ಲಿ ನಟಿಸಲು ಅವರು ಹಿಂದೇಟು ಹಾಕಿದರು. ಅದಕ್ಕೆ ಕಾರಣ ಕೂಡ ಇದೆ.
‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಬಹುತಾರಾಗಣವಿದೆ. ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಕಾರ್ತಿ, ತ್ರಿಷಾ, ಪ್ರಕಾಶ್ ರಾಜ್, ಜಯಂ ರವಿ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಒಂದು ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚುವಂತೆ ಅಮಲಾ ಪೌಲ್ ಅವರಿಗೂ ಆಫರ್ ನೀಡಲಾಗಿತ್ತು. ಅದಕ್ಕಾಗಿ ಅವರು ಆಡಿಷನ್ನಲ್ಲಿಯೂ ಭಾಗವಹಿಸಿ ಆಯ್ಕೆ ಆಗಿದ್ದರು. ಆದರೆ ಆ ಸಂದರ್ಭದಲ್ಲಿ ‘ಪೊನ್ನಿಯಿನ್ ಸೆಲ್ವನ್’ ಚಿತ್ರ ಸೆಟ್ಟೇರುವುದು ತಡವಾದ್ದರಿಂದ ಅವರು ಚಿತ್ರತಂಡದಿಂದ ಹೊರನಡೆದಿದ್ದರು.
‘ನಾನು ಮಣಿರತ್ನಂ ಸರ್ ಅಭಿಮಾನಿ. ಮೊದಲ ಸಲ ಈ ಚಿತ್ರ ಸೆಟ್ಟೇರದೇ ಇದ್ದಾಗ ನನಗೆ ತುಂಬ ಬೇಸರ ಆಗಿತ್ತು. 2021ರಲ್ಲಿ ಅದೇ ಪ್ರಾಜೆಕ್ಟ್ಗಾಗಿ ನನಗೆ ಅವರು ಮತ್ತೆ ಕರೆ ಮಾಡಿದರು. ಆದರೆ ಆಗ ನಾನು ಸಿನಿಮಾದಲ್ಲಿ ನಟಿಸುವ ಮನಸ್ಥಿತಿ ಹೊಂದಿರಲಿಲ್ಲ. ಅಂಥ ಅವಕಾಶ ಮಿಸ್ ಮಾಡಿಕೊಂಡಿದ್ದಕ್ಕೆ ನನಗೆ ಬೇಸರ ಇಲ್ಲ. ಕೆಲವೊಂದು ವಿಷಯಗಳು ಆಗುವುದೇ ಹೀಗೆ’ ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಅಮಲಾ ಪೌಲ್ ಹೇಳಿದ್ದಾರೆ.
ಕಲ್ಕಿ ಕೃಷ್ಣಮೂರ್ತಿ ಅವರು ಬರೆದ ‘ಪೊನ್ನಿಯಿನ್ ಸೆಲ್ವನ್’ ಕಾದಂಬರಿ ಆಧರಿಸಿ ಈ ಚಿತ್ರ ತಯಾರಾಗಿದೆ. ಅದ್ದೂರಿ ಬಜೆಟ್ನಲ್ಲಿ ಸಿನಿಮಾ ಮೂಡಿಬಂದಿದೆ. ಕೆಲವೇ ದಿನಗಳ ಹಿಂದೆ ಟ್ರೇಲರ್ ಬಿಡುಗಡೆ ಆಗಿದ್ದು, ಎಲ್ಲರ ಪಾತ್ರಗಳ ಬಗ್ಗೆಯೂ ಪರಿಚಯ ಮಾಡಿಕೊಡಲಾಗಿದೆ. ಸೆಪ್ಟೆಂಬರ್ 30ರಂದು ಈ ಚಿತ್ರ ರಿಲೀಸ್ ಆಗಲಿದೆ.
ಇದು ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನಾ. ಈ ಟ್ರೆಂಡ್ನಲ್ಲಿ ‘ಪೊನ್ನಿಯಿನ್ ಸೆಲ್ವನ್’ ಚಿತ್ರ ಕೂಡ ಇದೆ. ತಮಿಳಿನ ಈ ಸಿನಿಮಾ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಗೆ ಡಬ್ ಆಗಿ ತೆರೆಕಾಣುತ್ತಿದೆ. ಇದರ ಹಾಡುಗಳು ಮತ್ತೆ ಟ್ರೇಲರ್ ಗಮನ ಸೆಳೆದಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:32 am, Mon, 12 September 22