
ತೆಲುಗು ಚಿತ್ರರಂಗದ ಸ್ಟಾರ್ ನಟ ಜೂ ಎನ್ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಈ ಸಿನಿಮಾಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಜೂ ಎನ್ಟಿಆರ್. ಈ ಸಿನಿಮಾಕ್ಕಾಗಿ ತೂಕ ಕಳೆದುಕೊಂಡಿದ್ದಾರೆ. ಕಠಿಣವಾದ ಡಯಟ್ ಮಾಡಿದ್ದಾರೆ. ಈ ಸಿನಿಮಾ 2027ಕ್ಕೆ ರಿಲೀಸ್ ಆಗಲಿದೆ. ಇದರ ನಡುವೆ ಜೂ ಎನ್ಟಿಆರ್, ತ್ರಿವಿಕ್ರಮ್ ನಿರ್ದೇಶನ ಮಾಡಲಿರುವ ಸಿನಿಮಾನಲ್ಲಿ ನಟಿಸಲಿದ್ದು, ಸಿನಿಮಾದ ಅಧಿಕೃತ ಘೋಷಣೆ ಈಗಾಗಲೇ ಆಗಿದೆ. ಇದೀಗ ಆ ಸಿನಿಮಾದ ಬಗ್ಗೆ ಖುದ್ದು ನಿರ್ದೇಶಕ ತ್ರಿವಿಕ್ರಮ್ ಮಾಹಿತಿ ಹಂಚಿಕೊಂಡಿದ್ದಾರೆ.
ತೆಲುಗಿನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾಗಿರುವ ತ್ರಿವಿಕ್ರಮ್ ಶ್ರೀನಿವಾಸ್, ಪ್ರಸ್ತುತ ‘ಆದರ್ಶ ಕುಟುಂಬಂ’ ಹೆಸರಿನ ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ನಿರ್ದೇಶಿಸಿದ್ದು, ಆ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ. ಸಿನಿಮಾದ ಪ್ರಚಾರ ಆರಂಭವಾಗಿದ್ದು, ಅದರ ಭಾಗವಾಗಿ ನೀಡಿದ ಸಂದರ್ಶನವೊಂದರಲ್ಲಿ ತ್ರಿವಿಕ್ರಮ್ ಅವರು ಜೂ ಎನ್ಟಿಆರ್ ಜೊತೆಗೆ ಮಾಡಲಿರುವ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ. ಕೆಲ ಪ್ರಮುಖ ಮಾಹಿತಿಗಳನ್ನು ಸಹ ಹಂಚಿಕೊಂಡಿದ್ದಾರೆ.
ತೆಲುಗಿನ ಜನಪ್ರಿಯ ನಿರೂಪಕಿ ಸುಮಾ ಅವರಿಗೆ ನೀಡಿದ ಸಂದರ್ಶನದಲ್ಲಿ ಜೂ ಎನ್ಟಿಆರ್ ಜೊತೆಗಿನ ಸಿನಿಮಾ ಬಗ್ಗೆ ಮಾತನಾಡಿರುವ ತ್ರಿವಿಕ್ರಮ್ ಶ್ರೀನಿವಾಸ್, ‘ಆ ಸಿನಿಮಾದ ಚಿತ್ರಕತೆ ಸಂಪೂರ್ಣವಾಗಿದೆ. ಸಿನಿಮಾದ ಹೆಸರು ಏನಾಗಿರಲಿದೆ ಎಂಬುದನ್ನು ನಾವು ಇನ್ನೂ ನಿರ್ಧರಿಸಿಲ್ಲ. ‘ಗಾಡ್ ಆಫ್ ವಾರ್’ ಎಂಬುದು ಸಿನಿಮಾದ ಹೆಸರಲ್ಲ, ಅದು ಟ್ಯಾಗ್ ಲೈನ್ ಅಷ್ಟೆ. ಸಿನಿಮಾದ ಚಿತ್ರೀಕರಣವನ್ನು ನಾವು 2027ರಲ್ಲಿ ಪ್ರಾರಂಭ ಮಾಡಲಿದ್ದೇವೆ’ ಎಂದಿದ್ದಾರೆ.
ಇದನ್ನೂ ಓದಿ:ತೆಲುಗು ಚಿತ್ರರಂಗದಲ್ಲಿ ಇತಿಹಾಸ ಬರೆದ ಸಮಂತಾ, ಹಲವು ದಾಖಲೆ ದೂಳಿಪಟ
ತ್ರಿವಿಕ್ರಮ್ ಶ್ರೀನಿವಾಸ್ ಅವರು ತಮಿಳರ ಆರಾಧ್ಯ ದೈವ ಮುರುಗನ್ ಅಥವಾ ಕಾರ್ತಿಕೇಯ ಸ್ವಾಮಿಯ ಕುರಿತಾದ ಕತೆಯನ್ನು ಜೂ ಎನ್ಟಿಆರ್ ಅವರಿಗಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮುರುಗನ್ ಯುದ್ಧಗಳ ದೇವತೆಯಾಗಿಯೂ ಖ್ಯಾತರು. ಇದೀಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಮುರುಗನ್ ದೇವರ ಆಯುಧದ ಜೊತೆಗೆ ಡಿಎನ್ಎ ಚಿತ್ರವೂ ಇದ್ದು, ಈ ಸಿನಿಮಾದ ಕತೆಯು ಪೌರಾಣಿಕ ಕತೆಯ ಜೊತೆಗೆ ಆಧುನಿಕತೆಯನ್ನು ಬೆಸೆದುಕೊಂಡಿರುವ ಬಗ್ಗೆ ಸುಳಿವು ನೀಡುತ್ತಿದೆ.
ಈ ಹಿಂದೆ ತ್ರಿವಿಕ್ರಮ್ ಶ್ರೀನಿವಾಸ್ ಅವರು ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ‘ಅತಡು’, ‘ಜಲ್ಸಾ’, ‘ಅತ್ತಾರಿಂಟಿಕಿ ದಾರೇದಿ’, ‘ಖಲೇಜ’, ‘ಜುಲಾಯಿ’, ‘ಸನ್ ಆಫ್ ಸತ್ಯಮೂರ್ತಿ’ ಇನ್ನೂ ಕೆಲವು ಸಿನಿಮಾಗಳನ್ನು ನೀಡಿದ್ದಾರೆ. ಜೂ ಎನ್ಟಿಆರ್ ಜೊತೆಗೆ ‘ಅರವಿಂದ ಸಮೇತ ವೀರ ರಾಘವ’ ಸಿನಿಮಾ ಮಾಡಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಎರಡನೇ ಬಾರಿ ಜೂ ಎನ್ಟಿಆರ್ ಜೊತೆಗೆ ತ್ರಿವಿಕ್ರಮ್ ಶ್ರೀನಿವಾಸ್ ಕೈಜೋಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ