ಟಾಪ್ ಟ್ರೆಂಡಿಂಗ್​​ನಲ್ಲಿ ‘ಕಿಂಗ್ಡಮ್’: ಅಡ್ವಾನ್ಸ್ ಬುಕಿಂಗ್ ಬಲು ಜೋರು

Kingdom movie release: ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಜುಲೈ 31 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಸಾವಿರಗಳ ಲೆಕ್ಕದಲ್ಲಿ ಟಿಕೆಟ್​ಗಳು ಬಿಕರಿ ಆಗುತ್ತಿವೆ. ಸ್ಪೈ ಆಕ್ಷನ್ ಥ್ರಿಲ್ಲರ್ ಕತೆಯನ್ನು ಸಿನಿಮಾ ಒಳಗೊಂಡಿದ್ದು, ಸಿನಿಮಾದ ಹಾಡುಗಳು, ಟ್ರೈಲರ್ ಬಿಡುಗಡೆ ಆಗಿ ಸಖತ್ ವೈರಲ್ ಆಗಿವೆ.

ಟಾಪ್ ಟ್ರೆಂಡಿಂಗ್​​ನಲ್ಲಿ ‘ಕಿಂಗ್ಡಮ್’: ಅಡ್ವಾನ್ಸ್ ಬುಕಿಂಗ್ ಬಲು ಜೋರು
Kingdom Movie

Updated on: Jul 29, 2025 | 4:00 PM

ವಿಜಯ್ ದೇವರಕೊಂಡ (Vijay Deverakonda) ನಟನೆಯ ‘ಕಿಂಗ್ಡಮ್’ ಸಿನಿಮಾ ಜುಲೈ 31 ರಂದು ಬಿಡುಗಡೆ ಆಗಲಿದೆ. ಇದೊಂದು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಟ್ರೈಲರ್​​ ಸಖತ್ ಗಮನ ಸೆಳೆದಿದೆ. ಸಿನಿಮಾದ ಪ್ರಚಾರವನ್ನೂ ಸಹ ವಿಜಯ್ ದೇವರಕೊಂಡ ಬಲು ಜೋರಾಗಿ ಮಾಡುತ್ತಿದ್ದಾರೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಕೆಲವೆಡೆ ಆರಂಭವಾಗಿದ್ದು, ಟಿಕೆಟ್​ಗಳು ಬಲು ವೇಗವಾಗಿ ಬಿಕರಿ ಆಗುತ್ತಿವೆ. ಕೆಲವೇ ಗಂಟೆಗಳಲ್ಲಿ ಸಾವಿರಾರು ಟಿಕೆಟ್​ಗಳು ಮುಂಗಡವಾಗಿ ಬುಕ್ ಆಗಿವೆ.

ಬುಕ್​​ ಮೈ ಶೋನಲ್ಲಿ ‘ಕಿಂಗ್ಡಮ್’ ಸಿನಿಮಾ ಸಖತ್ ಟ್ರೆಂಡಿಂಗ್​​ನಲ್ಲಿದೆ. ಕೇವಲ ಒಂದು ಗಂಟೆಯಲ್ಲಿ ಸಿನಿಮಾದ ನಾಲ್ಕು ಸಾವಿರಕ್ಕೂ ಹೆಚ್ಚು ಟಿಕೆಟ್​ಗಳು ಆನ್​ಲೈನ್​​ನಲ್ಲಿ ಮಾರಾಟವಾಗಿದೆ. ಆಂಧ್ರ, ತೆಲಂಗಾಣದ ಕೆಲವು ಚಿತ್ರಮಂದಿರಗಳಲ್ಲಿ ಕೆಲವು ಶೋಗಳು ಮುಂಗಡವಾಗಿ ಬುಕ್ ಆಗಿಬಿಟ್ಟಿವೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಕರ್ನಾಟಕದಲ್ಲಿಯೂ ಬೇಡಿಕೆ ಜೋರಾಗಿದೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಅರ್ಲಿ ಮಾರ್ನಿಂಗ್ ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಈಗಾಗಲೇ ಕೆಲವು ಶೋಗಳು ಹೌಸ್​ಫುಲ್ ಸಹ ಆಗಿವೆ.

ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾವನ್ನು ಗೌತಮ್ ತಿನರೂರಿ ನಿರ್ದೇಶನ ಮಾಡಿದ್ದು, ಇವರು ಈ ಮುಂಚೆ ‘ಜೆರ್ಸಿ’ ಹೆಸರಿನ ಬ್ಲಾಕ್ ಬಸ್ಟರ್ ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಸಹ ಬಂದಿತ್ತು. ‘ಕಿಂಗ್ಡಮ್’ ಸಿನಿಮಾನಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ನಟ ಸತ್ಯದೇವ್ ಸಹ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರುವ ಜೊತೆಗೆ ಸಹೋದರರ ಸೆಂಟಿಮೆಂಟ್ ಸಹ ಒಳಗೊಂಡಿದೆ.

ಇದನ್ನೂ ಓದಿ:ಥ್ರಿಲ್ ನೀಡಿದ ವಿಜಯ್ ದೇವರಕೊಂಡ ಎಂಟ್ರಿ

ಇತ್ತೀಚೆಗೆ ನಡೆದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಜಯ್ ದೇವರಕೊಂಡ, ‘ಇನ್ನೆರಡು ದಿನಗಳಲ್ಲಿ ನಾವು ಚಿತ್ರಮಂದಿರದಲ್ಲಿ ಭೇಟಿ ಆಗೋಣ. ಜುಲೈ 31ಕ್ಕೆ ‘ಕಿಂಗ್ಡಮ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಮನದಲ್ಲಿ ಸಣ್ಣ ಭಯ, ಅಳುಕು ಇದೆ. ನಿಮಗೆ ಸಿನಿಮಾ ಇಷ್ಟವಾಗುತ್ತಾ ಎಂಬ ಕಾತರ ಇದೆ. ಅದರ ಜೊತೆಗೆ ನಂಬಿಕೆಯೂ ಇದೆ, ನಾವು ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ವಿಶ್ವಾಸವೂ ಇದೆ. ಅಭಿಮಾನಿಗಳು ಬಯಸಿದಂತೆಯೇ ಈ ಸಿನಿಮಾ ದೊಡ್ಡ ಹಿಟ್ ಆಗಲಿದೆ ಎಂಬ ಭರವಸೆ ನೀಡಿದ್ದಾರೆ.

‘ಕಿಂಗ್ಡಮ್’ ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ನಾಗ ವಂಶಿ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಗೆಲುವು ವಿಜಯ್ ದೇವರಕೊಂಡಗೆ ಬಹಳ ಅವಶ್ಯಕವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us