ಗೀತು ಮೋಹನ್​​ದಾಸ್ ಯಾರು? ‘ಟಾಕ್ಸಿಕ್’ ನಿರ್ದೇಶನಕ್ಕೆ ಅವರು ಆಯ್ಕೆ ಆಗಿದ್ದೇಕೆ?

Toxic movie director: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ನಿರ್ದೇಶಕಿ ಗೀತು ಮೋಹನ್​​ದಾಸ್ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದವರು, ‘ಟಾಕ್ಸಿಕ್’ ಅವರೇ ನಿರ್ದೇಶಿಸಿರುವ ಸಿನಿಮಾನಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಗೀತು ಮೋಹನ್​​ದಾಸ್ ಸೂಕ್ಷ್ಮ, ಭಾವುಕ ಸಿನಿಮಾಗಳಿಂದ ಹೆಸರಾದವರು, ಆದರೆ ಅಂಥಹವರು ಮಾಸ್, ಕಮರ್ಶಿಯಲ್ ಹೀರೋ ಯಶ್​​ಗೆ ಜೊತೆಯಾಗಿದ್ದು ಹೇಗೆ? ಏಕೆ?

ಗೀತು ಮೋಹನ್​​ದಾಸ್ ಯಾರು? ‘ಟಾಕ್ಸಿಕ್’ ನಿರ್ದೇಶನಕ್ಕೆ ಅವರು ಆಯ್ಕೆ ಆಗಿದ್ದೇಕೆ?
Toxic Movie

Updated on: Feb 20, 2026 | 12:10 PM

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಟೀಸರ್ ಇಂದಷ್ಟೆ ಬಿಡುಗಡೆ ಆಗಿದ್ದು, ಟೀಸರ್ ಸಖತ್ ‘ಬ್ಲಡ್ಡಿ’ ಆಗಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಯಶ್ ಅವರ ಕ್ಯಾರೆಕ್ಟರ್ ಟೀಸರ್ ಸಹ ಸಖತ್ ವೈಲೆಂಟ್ ಆಗಿತ್ತು, ಈಗ ಬಿಡುಗಡೆ ಆಗಿರುವ ಸಿನಿಮಾ ಟೀಸರ್ ಸಹ ಬಹಳ ವೈಲೆಂಟ್ ಆಗಿದೆ. ‘ಟಾಕ್ಸಿಕ್’ ಸಿನಿಮಾ ನಿರ್ದೇಶಕಿ ಗೀತು ಮೋಹನ್​​ದಾಸ್ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದವರು, ‘ಟಾಕ್ಸಿಕ್’ ಅವರೇ ನಿರ್ದೇಶಿಸಿರುವ ಸಿನಿಮಾನಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಗೀತು ಮೋಹನ್​​ದಾಸ್ ಸೂಕ್ಷ್ಮ, ಭಾವುಕ ಸಿನಿಮಾಗಳಿಂದ ಹೆಸರಾದವರು, ಆದರೆ ಅಂಥಹವರು ಮಾಸ್, ಕಮರ್ಶಿಯಲ್ ಹೀರೋ ಯಶ್​​ಗೆ ಜೊತೆಯಾಗಿದ್ದು ಹೇಗೆ? ಏಕೆ?

ಗೀತು ಮೋಹನ್​​ದಾಸ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಾಲ ನಟಿಯಾಗಿ. ಆ ನಂತರ 2000 ರಲ್ಲಿ ಮೋಹನ್​​ಲಾಲ್ ಎದುರು ನಾಯಕಿಯಾಗಿ ನಟಿಸಿದರು. ಬಳಿಕ ಮುಂದಿನ ಒಂಬತ್ತು ವರ್ಷಗಳ ವರೆಗೆ ಹಲವಾರು ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ಗೀತು ಮೋಹನ್​​ದಾಸ್ ನಟಿಸಿದರು. ಆದರೆ 2009 ರಲ್ಲಿ ನಟನೆಗೆ ವಿದಾಯ ಹೇಳಿ ಸಿನಿಮಾ ನಿರ್ದೇಶನಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡರು. ‘ಟಾಕ್ಸಿಕ್’ ಸಿನಿಮಾ ನಿರ್ದೇಶನಕ್ಕೂ ಮುನ್ನ ಗೀತು ಮೋಹನ್​​ದಾಸ್ ನಿರ್ದೇಶಿಸಿರುವುದು ಕೇವಲ ಎರಡೇ ಸಿನಿಮಾಗಳನ್ನು ಆ ಎರಡೂ ಸಿನಿಮಾಗಳು ಸಹ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಗಿಲ್ಲ ಆದರೆ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿವೆ. ಬಹಳ ಭಿನ್ನವಾಗಿಯೂ, ಮುಖ್ಯ ವಾಹಿನಿ ಪ್ರತ್ಯೇಕವಾಗಿಯೂ ಇವೆ. ತಮ್ಮ ಸಿನಿಮಾಗಳಿಂದ ಸೂಕ್ಷ್ಮ ಸಂವೇದನೆಯ ನಿರ್ದೇಶಕಿ ಎನಿಸಿಕೊಂಡಿದ್ದಾರೆ ಗೀತು ಮೋಹನ್​​ದಾಸ್ ಆದರೆ ಅವರು ‘ಟಾಕ್ಸಿಕ್’ ಅಂಥಹಾ ಮಾಸ್ ಮಸಾಲ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವುದೇ ಆಶ್ಚರ್ಯ ತಂದಿತ್ತು.

ಇದನ್ನೂ ಓದಿ:‘ಟಾಕ್ಸಿಕ್’ ಟೀಸರ್ ಡೈಲಾಗ್ ಮೂಲಕ ‘ಧುರಂಧರ್ 2’ಗೆ ಎಚ್ಚರಿಕೆ ಕೊಟ್ಟ ಯಶ್

ಗೀತು ಮೋಹನ್​​ದಾಸ್ ಮೊದಲು ನಿರ್ದೇಶಿಸಿದ್ದ ನವಾಜುದ್ಧೀನ್ ಸಿದ್ಧಿಖಿ ‘ಲೈಯರ್ಸ್ ಡೈಸ್’ ಹೆಸರಿನ ಸಿನಿಮಾ ನಿರ್ದೇಶಿಸಿದ್ದರು. ಬಹಳ ಸೂಕ್ಷ್ಮ ಭಾವುಕತೆಗಳನ್ನು ಹೊಂದಿದ್ದ ಈ ಸಿನಿಮಾ 2014 ರಲ್ಲಿ ಬಿಡುಗಡೆ ಆಗಿತ್ತು ಮತ್ತು ಭಾರತದಿಂದ ಆ ವರ್ಷ ಅಧಿಕೃತವಾಗಿ ಆಸ್ಕರ್​​ಗೆ ಸಹ ಆಯ್ಕೆ ಆಗಿತ್ತು. ಸಿನಿಮಾಕ್ಕೆ ಎರಡು ರಾಷ್ಟ್ರಪ್ರಶಸ್ತಿಗಳ ಜೊತೆಗೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದೆ. ಹಿಮಾಚಲದ ಸಣ್ಣ ಹಳ್ಳಿಯಿಂದ ಪತಿಯನ್ನು ಹುಡುಕಿಕೊಂಡು ದೆಹಲಿಗೆ ಬರುವ ಮಹಿಳೆಯೊಬ್ಬಳ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ಸಿನಿಮಾದ ಬಗ್ಗೆ ಹಾಲಿವುಡ್ ಪತ್ರಿಕೆ ವೆರೈಟಿ ಸಹ ಮೆಚ್ಚಿ ಕೊಂಡಾಡಿತ್ತು.

ಬಳಿಕ ‘ಮೂತನ್’ ಹೆಸರಿನ ಮಲಯಾಳಂ ಸಿನಿಮಾ ನಿರ್ದೇಶಿಸಿದರು ಗೀತು ಮೋಹನ್​​ದಾಸ್ ಈ ಸಿನಿಮಾ ಗ್ಯಾಂಗ್​​ಸ್ಟರ್ ಸಿನಿಮಾ ಆಗಿತ್ತು. ಹೆಸರಿಗೆ ಇದು ಗ್ಯಾಂಗ್​​ಸ್ಟರ್ ಸಿನಿಮಾ ಆಗಿದ್ದರೂ ಸಹ ನಿಜಕ್ಕೂ ಇದು ಲಿಂಗ ಭೇದ, ಸಲಿಂಗಕಾಮದ ಸೂಕ್ಷ್ಮಗಳನ್ನು ಸಹ ಸಿನಿಮಾ ಒಳಗೊಂಡಿತ್ತು. ಇವುಗಳನ್ನು ಒಂದು ಕಮರ್ಶಿಯಲ್ ಚೌಕಟ್ಟಿನಲ್ಲಿ ಗೀತು ಮೋಹನ್​​ದಾಸ್ ಅದ್ಭುತವಾಗಿ ಹಿಡಿದಿಟ್ಟಿದ್ದರು. ಈ ಸಿನಿಮಾನಲ್ಲಿನ ಕೆಲವು ಫ್ರೇಮ್​​ಗಳು ಅದ್ಭುತವಾಗಿದ್ದವು. ಈ ಸಿನಿಮಾ ಸಹ ಕೆಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿತು.

ಮೂಲಗಳ ಪ್ರಕಾರ ‘ಮೂತನ್’ ಸಿನಿಮಾದಿಂದಾಗಿಯೇ ಯಶ್ ಅವರು ಗೀತು ಮೋಹನ್​​ದಾಸ್ ಅವರೊಟ್ಟಿಗೆ ಕೆಲಸ ಮಾಡುವ ನಿರ್ಧಾರ ಮಾಡಿದರು ಎನ್ನಲಾಗಿದೆ. ಗೀತು ಮೋಹನ್​​ದಾಸ್ ಬಳಿ ಕತೆ ಒಂದು ರೆಡಿಯಿತ್ತು, ಆದರೆ ಅದಕ್ಕೆ ಕಮರ್ಶಿಯಲೈಸ್ ಮತ್ತು ಮಾಸ್ ತನಗಳನ್ನು ಬೆರೆಸಿರುವುದು ಯಶ್ ಅವರೇ ಎನ್ನಲಾಗುತ್ತಿದೆ.

ಸಿನಿಮಾದ ಟೀಸರ್, ಟ್ರೈಲರ್​​ನಲ್ಲಿ ಅತಿಯಾದ ಹಿಂಸೆ, ಗ್ಲಾಮರ್ ಕಾಣುತ್ತಿದೆಯಾದರೂ ಸಿನಿಮಾದ ಒಟ್ಟು ಆಶಯ ಇದಕ್ಕೆ ವಿರುದ್ಧವಾಗಿಯೇ ಇರಲಿದೆ ಎಂಬುದು ಗೀತು ಮೋಹನ್​​ದಾಸ್ ಅವರ ಅಭಿಮಾನಿಗಳ ನಿರೀಕ್ಷೆ. ನಿಜ, ಸಿನಿಮಾ ಬಿಡುಗಡೆ ಆದ ಬಳಿಕವೇ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ