ಹಿಂದೂ ಕ್ಯಾಲೆಂಡರಿನ ಪ್ರಕಾರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆಯೆಂದು ಆಚರಿಸುತ್ತಾರೆ. ಈ ದಿನ ಪುಣ್ಯ ಕ್ಷೇತ್ರದ ಪುಷ್ಕರಣಿ, ನದಿ ಸಮುದ್ರದಲ್ಲಿ ಸ್ನಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿ ಇದೆ. ಹೀಗಾಗಿ ಜಿಲ್ಲೆಯ ಪ್ರಮುಖ ಪ್ರವಾಸಿತಾಣದಲ್ಲಿ, ಕಾಡಿನ ಮಧ್ಯೆ ಹಬ್ಬ ವಾತಾವರಣ ಸೃಷ್ಟಿಯಾಗಿದೆ. ಹಾಗಾದ್ರೆ ಯಾವುದು ಇದು ಪ್ರವಾಸಿ ತಾಣ, ಏನಿದು ಹಬ್ಬ ಅಂತೀರಾ ಈ ಸ್ಟೋರಿ ನೋಡಿ…
ಹೌದು ಉಡುಪಿ ಜಿಲ್ಲೆಯಲ್ಲಿ ದೈವ ದೇವರಗಳ ಗುಡಿ ಮಂದಿರಗಳಿಗೇನೂ ಕೊರತೆಯಿಲ್ಲ. ಇಲ್ಲಿ ಆಚರಣೆಗಳು ಕೂಡ ರಾಜ್ಯದ ಇತರೆಡೆಗೆ ಹೋಲಿಸಿದರೆ ಕೊಂಚ ವಿಭಿನ್ನ ಮತ್ತು ವಿಶಿಷ್ಟ ಎಂದರೆ ತಪ್ಪಾಗಲಾರದು. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಸಾಕಷ್ಟು ಐತಿಹ್ಯಗಳಿರುವ ಸ್ಥಳಗಳಿವೆ.
ಅದರಲ್ಲೂ ಬಹುಮುಖ್ಯವಾಗಿ ಗುರುತಿಸಿಕೊಂಡಿರುವುದು ಜೋಮ್ಲು ತೀರ್ಥ. ಸನಾತನ ಭಾರತೀಯರ ಪರ್ವಕಾಲಗಳಲ್ಲಿ ಉತ್ತರಾಯಣ ಪರ್ವ ಕಾಲ ಅತ್ಯಂತ ಪುಣ್ಯ ಕಾಲವಾಗಿದ್ದು, ಮಕರ ಸಂಕ್ರಮಣದಿಂದ ಆರಂಭಗೊಂಡು, ಕರ್ಕಾಟಕ ಸಂಕ್ರಮಣದವರೆಗಿನ ಕಾಲವನ್ನು ಉತ್ತರಾಯಣ, ಕರ್ಕಾಟಕ ಸಂಕ್ರಮಣ ದಿಂದ ಮಕರ ಸಂಕ್ರಮಣದವರೆಗಿನ ಕಾಲವನ್ನು ದಕ್ಷಿಣಾಯಣ ಕಾಲ ಎನ್ನುತ್ತಾರೆ. ಮುಂಬರುವ ಮಕರ ಸಂಕ್ರಾಂತಿಯಿಂದ ದಕ್ಷಿಣಾಯಣ ಕಾಲ ಮುಗಿದು, ಉತ್ತರಾಯಣ ಕಾಲ ಆರಂಭ ವಾಗುವುದರಿಂದ ಎಳ್ಳಮಾವಾಸ್ಯೆ ದಿನ ಪುಣ್ಯ ಸ್ಥಳಗಳಲ್ಲಿ ತೀರ್ಥಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗಾಗಿ ಎಳ್ಳು ಅಮವಾಸೆಯ ದಿನದಂದು ಜೋಮ್ಲು ತೀರ್ಥದಲ್ಲಿ (Jomlu Theertha Falls) ಹಬ್ಬದ ವಾತವರಣ ಸೃಷ್ಟಿಯಾಗುತ್ತದೆ.
ಹೆಬ್ರಿ ಚಾರ ಸಮೀಪದಲ್ಲಿರುವ ಈ ಜೋಮ್ಲು ತೀರ್ಥ ನೈಸರ್ಗಿಕವಾಗಿ ಕಲ್ಲು ಬಂಡೆಗಳ ನಡುವೆ ಹರಿಯುವ ಸೀತಾನದಿಯಿಂದ ಸೃಷ್ಟಿಯಾದ ತಾಣ ಇದು. ಹಿಂದೆ ಋಷಿ ಮುನಿಗಳು ಇದೇ ಸ್ಥಳದಲ್ಲಿ ಧ್ಯಾನ ಮಾಡಿದ್ದಾರೆ ಎನ್ನುವ ಐತಿಹ್ಯ ಹೊಂದಿರುವ ಸ್ಥಳ. ದಟ್ಟ ಕಾಡಿನ ಮಧ್ಯೆ ಇರುವ ಈ ಜೋಮ್ಲು ತೀರ್ಥಕ್ಕೆ ಪ್ರತಿ ವರ್ಷ ಎಳ್ಳು ಅಮವಾಸೆಯಂದು ಸಾವಿರಾರು ಭಕ್ತರು ಬಂದು ತೀರ್ಥ ಸ್ನಾನ ಮಾಡಿ ತೆರಳುತ್ತಾರೆ. ಜೋಮ್ಲು ತೀರ್ಥದ ತಟದಲ್ಲಿ ಜೋಮ್ಲು ಬೊಬ್ಬಯ್ಯ ದೈವವಿದ್ದು, ತೀರ್ಥ ಸ್ನಾನ ಮಾಡಿ ಬಂದ ಭಕ್ತರು ಇಲ್ಲಿ ಹಣ್ಣು ಕಾಯಿ ಅರ್ಪಿಸಿ ತೆರಳುವುದು ವಾಡಿಕೆ.
ಕೊರಕಲು ಮಧ್ಯೆ ಹರಿಯುವ ನದಿಯ ನೀರು ಕೆಳಕ್ಕೆ ಜಿಗಿಯುವ ನೀರಿನಲ್ಲಿ ತೀರ್ಥ ಸ್ನಾನ ಮಾಡಲು ದೂರದೂರದಿಂದಲೂ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಪ್ರತಿ ವರ್ಷ ಇಲ್ಲಿ ಎಳ್ಳು ಅಮವಾಸೆ ಬಂತು ಎಂದರೆ ಸಾಕು ಕಾಡಿನ ಮಧ್ಯೆ ಹಬ್ಬ ವಾತಾವರಣವೇ ಸೃಷ್ಟಿಯಾಗುತ್ತದೆ. ಜೋಮ್ಲು ತೀರ್ಥ ಕೇವಲ ತೀರ್ಥ ಕ್ಷೇತ್ರವಾಗಿ ಗುರುತಿಸಿಕೊಳ್ಳದೆ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ಬರುವ ಪ್ರವಾಸಿಗರು ಸೆಲ್ಫಿ ಹುಚ್ಚಿನಿಂದಾಗಿ ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಇಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಕೆಲವು ವರ್ಷಗಳಿಂದ ಕೇವಲ ಎಳ್ಳು ಅಮವಾಸೆ ಹಬ್ಬಕ್ಕಾಗಿ ಮಾತ್ರ ಇಲ್ಲಿ ತೀರ್ಥ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಒಟ್ಟಾರೆಯಾಗಿ ಕಾಡಿನ ಮಧ್ಯೆ ನಡೆಯುವ ಈ ಜಾತ್ರೆ ನೋಡಲು ಬಲು ಸೊಗಸು. ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿ ಅನ್ನದಾನ ಸೇವೆಯ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡ ನಡೆಯುತ್ತಿರುವುದು ಇಲ್ಲಿನ ಭಕ್ತರಿಗೆ ಸಂತಸ ನೀಡುತ್ತಿದೆ.
Published On - 7:25 pm, Thu, 11 January 24